ಯೆಚೂರಿಯೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಪ್ರಕಾಶ್ ಕಾರಟ್

Update: 2018-01-26 15:55 GMT

ಹೊಸದಿಲ್ಲಿ, ಜ.26: ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರೊಂದಿಗೆ ತನಗೆ ಯಾವುದೇ ಭಿನ್ನಮತವಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.

ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲಿ ತಮ್ಮಿಬ್ಬರ ಮಧ್ಯೆ ಭಿನ್ನಮತವಿದೆ ಎಂಬುದನ್ನು ತಳ್ಳಿಹಾಕಿದ ಕಾರಟ್, ಅಭಿಪ್ರಾಯದಲ್ಲಿ ವಿಭಿನ್ನತೆ ಇದ್ದರೆ ಅದು ಪಕ್ಷದೊಳಗಿನ ಪ್ರಜಾಪ್ರಭುತ್ವ ವ್ಯವಸ್ಥೆಯ ದ್ಯೋತಕವಾಗಿದೆ . ತಮ್ಮಿಬ್ಬರ ವಿಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಮಾಧ್ಯಮಗಳು ‘ವೈಯಕ್ತಿಕ ಭಿನ್ನಮತ, ವೈಯಕ್ತಿಕ ಸಂಘರ್ಷ’ ಎಂದು ವಿಶ್ಲೇಸಿವೆ ಎಂದಿದ್ದಾರೆ.

 ಅದಾಗ್ಯೂ, ಪಕ್ಷದ ಸಾಮೂಹಿಕ ನಿರ್ಧಾರಗಳನ್ನು ಉಲ್ಲಂಘಿಸುವವರನ್ನು ಗುಂಪುಗಾರಿಕೆ ಮಾಡುವವರು ಎಂದು ಪರಿಗಣಿಸಲಾಗುತ್ತದೆ ಎಂದು ಕಾರಟ್ ಹೇಳಿದರು. ಸಮಿತಿಯೊಳಗೆ ರಾಜಕೀಯ ವಿಷಯಕ್ಕೆ ಸಂಬಂಧಿಸಿ ಬಹುಮತದ ಅಭಿಪ್ರಾಯ ಅಥವಾ ವ್ಯಕ್ತಿಯ ಅಭಿಪ್ರಾಯವನ್ನು ಗುಂಪುಗಾರಿಕೆ ಎನ್ನಲಾಗದು. ಆದರೆ ಪಕ್ಷದೊಳಗೆ ತೆಗೆದುಕೊಳ್ಳಲಾಗುವ ಸಾಮೂಹಿಕ ನಿರ್ಧಾರವನ್ನು ಉಲ್ಲಂಘಿಸುವುದು ಹಾಗೂ ಅಪ್ರಸ್ತುತ ವಿಷಯಗಳಿಗೆ ಒಗ್ಗೂಡುವುದು ಗುಂಪುಗಾರಿಕೆಯಾಗಿದೆ ಎಂದವರು ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನೇತೃತ್ವದ ತಂಡವು, ಬಿಜೆಪಿಯ ‘ಕೋಮುವಾದಿ ಅಜೆಂಡಾ’ ವನ್ನು ಎದುರಿಸಲು ಜಾತ್ಯಾತೀತ ಪಕ್ಷಗಳು ಒಟ್ಟು ಸೇರಬೇಕೆಂದು ಒತ್ತಾಯಿಸಿದೆ. ಆದರೆ ಈ ಕುರಿತ ಕರಡು ನಿರ್ಣಯವು ಕೋಲ್ಕತಾದಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ತಿರಸ್ಕೃತವಾಗಿದ್ದು , ಪ್ರಕಾಶ್ ಕಾರಟ್ ಸೇರಿದಂತೆ ಹಲವು ಪ್ರಮುಖ ಮುಖಂಡರು ನಿರ್ಣಯವನ್ನು ವಿರೋಧಿಸಿದ್ದರು.

ಸಿಪಿಎಂ ಸಂವಿಧಾನದಲ್ಲಿ ಗುಂಪುಗಾರಿಕೆಗೆ ಅನುಮತಿಯಿಲ್ಲ ಎಂದು ತಾವು ಬರೆದಿರುವ ಲೇಖನದಲ್ಲಿ ತಿಳಿಸಿರುವ ಕಾರಟ್, ಪಕ್ಷದೊಳಗೆ ಒಡಕು ಮೂಡಿದೆ ಎಂಬ ರೀತಿಯಲ್ಲಿ ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ದೂರಿದರು. ಬಹುತೇಕ ಸುದ್ದಿ ಮಾಧ್ಯಮದ ಪ್ರತಿನಿಧಿಗಳಿಗೆ ಸಿಪಿಎಂ ಪಕ್ಷದ ಕಾರ್ಯವಿಧಾನದ ಕುರಿತು ತಿಳಿದಿಲ್ಲ. ಆದ್ದರಿಂದ ಇಂತಹ ಸಂದರ್ಭವನ್ನು ಬಳಸಿಕೊಂಡು, ಪಕ್ಷದ ನಾಯಕತ್ವವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ಕಾರಟ್ ಆರೋಪಿಸಿದ್ದಾರೆ.

  ಪಕ್ಷದ ಸಭೆಯಲ್ಲಿ ಎರಡು ಕರಡು ನಿರ್ಣಯಗಳನ್ನು ‘ಪ್ರತ್ಯೇಕ ಬಣ’ಗಳು ಮಂಡಿಸಿವೆ ಎಂದು ಕೇರಳ ಹಾಗೂ ಪಶ್ಚಿಮ ಬಂಗಾಲದ ಮಾಧ್ಯಮ ಸಂಸ್ಥೆಗಳ ವರದಿ ತಿಳಿಸಿದೆ. ಇಬ್ಬರು ಮುಖಂಡರ ಮಧ್ಯೆ ತೀವ್ರ ವಾಗ್ಯುದ್ದ ನಡೆದಿದೆ ಎಂದು ಕೂಡಾ ಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ರೀತಿಯ ವರದಿಗಳು ಆಧಾರ ರಹಿತವಾಗಿದೆ ಎಂದು ಕಾರಟ್ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News