ವ್ಯಾಪಕ ಆಕ್ರೋಶಕ್ಕೆ ಕಾರಣವಾದ ‘ದಲಿತರ ಓಲೈಕೆ’ ಶೀರ್ಷಿಕೆ

Update: 2018-01-26 16:03 GMT

ಹೊಸದಿಲ್ಲಿ, ಜ. 26: ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ಮೋದಿ ಸರಕಾರದ ನಿರ್ಧಾರ ‘ದಲಿತರ ಓಲೈಕೆ’ ಕ್ರಮ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭೀಮಾ ಕೋರೆಗಾಂವ್ ಹೋರಾಟದ ವಿಜಯ ದಿವಸದ ಆಚರಣೆ ಹಾಗೂ ಗುಜರಾತ್‌ನಲ್ಲಿ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ನಡೆದ ದಲಿತ ಚಳವಳಿಯ ಹಿನ್ನೆಲೆಯಲ್ಲಿ ಇಳಯರಾಜ ಅವರ ಆಯ್ಕೆ ತುಂಬ ಮಹತ್ತರದ್ದು ಎಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಚೆನ್ನೈ ಆವೃತ್ತಿ ಸುದ್ದಿ ಪ್ರಕಟಿಸಿತ್ತು.

 ಮುಖಪುಟದಲ್ಲಿ ಪ್ರಮುಖ ಶೀರ್ಷಿಕೆಯನ್ನು ಹೀಗೆ ಮುದ್ರಿಸಲಾಗಿತ್ತು ‘‘ಇಳಯರಾಜಗೆ ಪದ್ಮ: ದಲಿತರ ಓಲೈಕೆ’’. ಆದರೆ, ಈ ವರದಿಯಲ್ಲಿ ಈ ತೀರ್ಮಾನಕ್ಕೆ ಬರಲು ಕಾರಣವಾದ ಸರಕಾರದ ಮೂಲ ಅಥವಾ ವಿಶ್ಲೇಷಕರ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದರಿಂದ ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲ ತಾಣ ಬಳಸುವ ಹಲವರು ಇದನ್ನು ಕಟುವಾಗಿ ಟೀಕಿಸಿದ್ದಾರೆ.

ಗೆಳೆಯ ಕಳುಹಿಸಿದ ವ್ಯಾಟ್ಸ್ ಆಪ್‌ನಲ್ಲಿ ಮೊದಲು ಈ ಸಂದೇಶವನ್ನು ನೋಡಿದಾಗ, ದಿನಪತ್ರಿಕೆಯ ಗೌರವಕ್ಕೆ ಧಕ್ಕೆ ಉಂಟು ಮಾಡಲು ರೂಪಿಸಿದ ಫೋಟೋಶಾಪ್ ಸಂದೇಶ ಎಂದು ನಾನು ಭಾವಿಸಿದ್ದೆೆ ಎಂದು ಹಿರಿಯ ಪತ್ರಕರ್ತ ಆರ್.ಕೆ. ರಾಧಾಕೃಷ್ಣನ್ ಟ್ವೀಟ್ ಮಾಡಿದ್ದಾರೆ.

 ಇದು ‘ಆಘಾತಕಾರಿ’ ಎಂದು ಟಿ.ವಿ.ಯೊಂದರ ನಿರೂಪಕ ಸುಮಂತ್ ರಮಣ್ ಹೇಳಿದ್ದಾರೆ. ಈ ವರದಿ ಹಾಗೂ ಶೀರ್ಷಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಲೇಖಕ ಹಾಗೂ ವಿಡುದಲೈ ಚಿರುತೈಗಲ್ ಕಚ್ಚಿಯ ನಾಯಕ ಡಿ. ರವಿಕುಮಾರ್, ‘‘ಜಾತಿಯ ಕಿರಿದಾದ ಚೌಕಟ್ಟಿನಲ್ಲಿ ಮಹಾ ಮನುಷ್ಯನನ್ನು ಸೀಮಿತಗೊಳಿಸುವುದು ಸರಿಯೇ’’ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭೆಯ ಪರಿಕಲ್ಪನೆಯಲ್ಲಿ ಮೀಸಲಾತಿ ವಿರೋಧಿಸುವವರು, ಪ್ರತಿಭೆಯುಳ್ಳ ಸಂಗೀತ ನಿರ್ದೇಶಕರನ್ನು ಜಾತಿ ಬಳಸಿ ಅವಮಾನ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News