‘ಯುವ ಚೈತನ್ಯ’ ಯೋಜನೆಗೆ ಚಾಲನೆ: ರಾಜ್ಯದ 5000 ಯುವಸಂಘಗಳಿಗೆ ಕ್ರೀಡಾಕಿಟ್ ವಿತರಣೆ
ಉಡುಪಿ, ಜ.26: ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶ ದಿಂದ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ‘ಯುವ ಚೈತನ್ಯ’ ಯೋಜನೆಗೆ ಇಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಬೀಡಿನಗುಡ್ಡೆ ಮಹಾತ್ಮ ಗಾಂಧಿ ಬಯಲುರಂಗ ಮಂದಿರದಲ್ಲಿ ಚಾಲನೆ ನೀಡಿದರು.
ಆರೋಗ್ಯಯುತ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಬಾಂಧವ್ಯ ಬೆಸೆಯುವ ಯುವ ಸಂಘಗಳನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಆರಂಭಿಸಿ ರುವ ಈ ಯೋಜನೆಯಡಿ ಉಡುಪಿ ಜಿಲ್ಲೆಯ ಸುಮಾರು 600 ಸೇರಿದಂತೆ ರಾಜ್ಯದಾದ್ಯಂತ ಒಟ್ಟು 5000 ಯುವ ಸಂಘಗಳಿಗೆ ಒಟ್ಟು ತಲಾ 40,000ರೂ. ಮೌಲ್ಯದ ಕ್ರೀಡಾಕಿಟ್ಳನ್ನು ಇಂದು ವಿತರಿಸಲಾಗುತ್ತಿದೆ.
ಬಳಿಕ ಮಾತನಾಡಿದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯುವ ಚೈತನ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಒಂದು ವರ್ಷಕ್ಕೆ 20 ಕೋಟಿ ಮಂಜೂರು ಮಾಡಿದ್ದಾರೆ. ಪ್ರಥಮ ಹಂತದಲ್ಲಿ 5000 ಯುವ ಸಂಘಗಳಿಗೆ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಿಟ್ ವಿತರಿಸುವ ಕಾರ್ಯಕ್ರಮ ಇಂದು ನಡೆಯು ತ್ತಿದೆ. ಇದು ಒಟ್ಟು ಮೂರು ಹಂತದಲ್ಲಿ ನಡೆಯುತ್ತಿದ್ದು, ಪ್ರತಿವರ್ಷ 5000 ದಂತೆ ಮೂರು ವರ್ಷಗಳಲ್ಲಿ 15ಸಾವಿರ ಯುವ ಸಂಘಗಳಿಗೆ ಕಿಟ್ ವಿತರಿಸ ಲಾಗುವುದು. ಅದಕ್ಕಾಗಿ ಪ್ರತಿವರ್ಷ 20ಕೋಟಿ ಅನುದಾನವನ್ನು ಸರಕಾರ ಮಂಜೂರು ಮಾಡಲಿದೆ ಎಂದು ತಿಳಿಸಿದರು.
ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಯುವ ಸಂಘಗಳಿಗೆ ಈ ಕಿಟ್ ನೀಡಲಾಗುತ್ತಿದೆ. ಮಹಿಳೆಯರು ಮತ್ತು ಪುರುಷರಿಗೆ ಬೇಕಾದ ಕಿಟ್ ಇದರಲ್ಲಿದೆ. ಯುವಕರು ಸಮಾಜ ವಿರೋಧಿ ಚಟುವಟಿಕೆ ಬದಲು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳಲಿ ಎಂಬ ದೃಷ್ಠಿಯಿಂದ ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ಬಂದಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ, ಅಪರ ಜಿಲ್ಲಾಧಿಕಾರಿ ಅನುರಾಧ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.
ಕ್ರೀಡಾಕಿಟ್‌ನಲ್ಲಿ ಏನಿದೆ?
40 ಸಾವಿರ ರೂ. ಮೌಲ್ಯದ ಕ್ರೀಡಾಕಿಟ್‌ನಲ್ಲಿ ಮೂರು ವಾಲಿಬಾಲ್, ನೆಟ್, ಎರಡು ಕಂಬಗಳು, ಎರಡು ತ್ರೋಬಾಲ್, ಮೂರು ಫುಟ್‌ಬಾಲ್, ಎರಡು ಶಟ್ಲ್ ರಾಕೆಟ್, ಮೂರು ಕ್ರಿಕೆಟ್ ಬ್ಯಾಟ್, ಎರಡು ಸೆಟ್ ಸ್ಟಂಪ್, ಆರು ಟೆನಿಸ್ ಬಾಲ್, ಆರು ಟೆನಿಕಾಯಿಟ್ ರಿಂಗ್ ಮತ್ತು ಇವುಗಳನ್ನು ತುಂಬಿಸಿ ಕೊಳ್ಳಲು ದೊಡ್ಡ ಬ್ಯಾಗ್‌ನ್ನು ನೀಡಲಾಗಿದೆ. ಅಲ್ಲದೆ ಸಾಗಾಟ ವೆಚ್ಚ 500ರೂ. ವನ್ನು ಕೂಡ ಸಂಘಗಳಿಗೆ ನೀಡಲಾಗುತ್ತದೆ.