ಶಾಂತಿ ಒಪ್ಪಂದದಿಂದ ಹಿಂದೆ ಸರಿದರೆ ಫೆಲೆಸ್ತೀನ್‌ಗೆ ನೆರವು ಸ್ಥಗಿತ: ಡೊನಾಲ್ಡ್ ಟ್ರಂಪ್ ಬೆದರಿಕೆ

Update: 2018-01-26 16:19 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 26: ಇಸ್ರೇಲ್ ಜೊತೆಗಿನ ಶಾಂತಿ ಒಪ್ಪಂದದಿಂದ ಫೆಲೆಸ್ತೀನ್ ಹಿಂದೆ ಸರಿದರೆ, ಆ ದೇಶಕ್ಕೆ ನೀಡಲಾಗುವ ನೆರವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಭೇಟಿಯಾಗದೆ ಇರುವ ಮೂಲಕ ಫೆಲೆಸ್ತೀನ್ ಅಮೆರಿಕಕ್ಕೆ ಮುಖಭಂಗ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಟ್ರಂಪ್, ಮಧ್ಯಪ್ರಾಚ್ಯ ಶಾಂತಿಯ ಬಗ್ಗೆ ತಾನು ಗಮನ ಹರಿಸಿದ್ದೇನೆ ಎಂದರು.

ಜೆರುಸಲೇಮನ್ನು ಇಸ್ರೇಲ್ ರಾಜಧಾನಿ ಎಂಬುದಾಗಿ ಅಮೆರಿಕ ಕಳೆದ ತಿಂಗಳು ಮಾನ್ಯ ಮಾಡಿದ ಹಿನ್ನೆಲೆಯಲ್ಲಿ, ಈ ತಿಂಗಳು ಈ ವಲಯಕ್ಕೆ ಪ್ರವಾಸ ಕೈಗೊಂಡಿದ್ದ ಪೆನ್ಸ್‌ರನ್ನು ಭೇಟಿಯಾಗಲು ಫೆಲೆಸ್ತೀನ್ ಅಧಿಕಾರಿಗಳು ನಿರಾಕರಿಸಿದ್ದರು.

‘‘ನಮ್ಮ ಶ್ರೇಷ್ಠ ಉಪಾಧ್ಯಕ್ಷರನ್ನು ಭೇಟಿಯಾಗಲು ನಿರಾಕರಿಸುವ ಮೂಲಕ ಅವರು ನಮ್ಮನ್ನು ಅವಮಾನಿಸಿದ್ದಾರೆ. ಆದರೆ, ನಾವು ಅವರಿಗೆ ನೂರಾರು ಮಿಲಿಯ ಡಾಲರ್‌ಗಳನ್ನು ನೀಡುತ್ತೇವೆ. ಇದನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಹಣ ಈಗ ಮೇಜಿನಲ್ಲಿದೆ. ಈಗ ಅವರು ಶಾಂತಿ ಮಾತುಕತೆಗೆ ಮುಂದಾಗದಿದ್ದರೆ ಹಣ ಅವರಿಗೆ ಹೋಗುವುದಿಲ್ಲ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News