×
Ad

ಜ.27: ಮಾಸ್ ಇಂಡಿಯಾದ ರಾಷ್ಟ್ರೀಯ ಸಮಾವೇಶ

Update: 2018-01-26 21:51 IST

ಉಡುಪಿ, ಜ.26: ಅಖಿಲ ಭಾರತ ಮಟ್ಟದ ಸರಕಾರೇತರ ಸಂಸ್ಥೆಯಾಗಿರುವ ಮಾಹಿತಿ ಸೇವಾ ಸಮಿತಿಯ ಮೂರನೇ ರಾಷ್ಟ್ರೀಯ ಸಮಾವೇಶ ಜ.27ರಂದು ಉಡುಪಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಕ್ಲಾಸಿಕ್ ವಿಲೇಜ್ ರೆಸ್ಟೋರೆಂಟ್ ಪಾರ್ಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಮಾಸ್ ಇಂಡಿಯಾ ಎನ್‌ಜಿಒದ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟೆಯಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾವೇಶದಲ್ಲಿ ದೇಶದ ಎಲ್ಲಾ ಕಡೆಗಳಿಂದ ಮಾಹಿತಿ ಸೇವಾ ಸಮಿತಿಯ ಸದಸ್ಯರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ಮಾನವ ಹಕ್ಕಿನ ಕುರಿತಂತೆ ಹಾಗೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಮಕ್ಕಳ ಶೋಷಣೆ, ಅನ್ಯಾಯ ಹಾಗೂ ದೇಶದಲ್ಲಿ ನಡೆಯುತ್ತಿರುವ ದುರಾಚಾರದ ಕುರಿತಂತೆ ಚರ್ಚಿಸಲಾಗುವುದು ಎಂದವರು ಹೇಳಿದರು.

ದೇಶದಲ್ಲಿ ಕಾರ್ಮಿಕರ ವಿಮಾ ಯೋಜನೆಯಲ್ಲಿ ನಡೆಯುವ ವಂಚನೆ, ಗುತ್ತಿಗೆ ಕಾಮಗಾರಿಯಲಲಿ ನಡೆಯುವ ವಂಚನೆ ಕುರಿತು ಸಭೆ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿ ಗುತ್ತಿಗೆ ನೌಕರರಿದ್ದಾರೆ. ಇವರಿಗೆ ಕನಿಷ್ಠ ವೇತನವನ್ನು ನೀಡಲಾಗುತ್ತಿಲ್ಲ. ಅಲ್ಲದೇ ಅವರ ವೇತನದಿಂದ ಕಡಿತ ಮಾಡಲಾಗುವ ಇಪಿಎಫ್, ಇಎಸ್‌ಐ ಹಾಗೂ ಸೇವಾ ತೆರಿಗೆ ಹಣವನ್ನು ಸರಕಾರದ ಖಜಾನೆಗೆ ಕಟ್ಟಲಾಗುತ್ತಿಲ್ಲ. ಇದರಲ್ಲಿ ರಾಜ್ಯದಲ್ಲಿ ಸುಮಾರು 200 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಕೋಟೆಯಾರ್ ಆರೋಪಿಸಿದರು.

ಈ ಸಮಾವೇಶದಲ್ಲಿ ಚರ್ಚೆ ನಡೆಸಿ ಇಡೀ ದೇಶದಲ್ಲಿ ಗುತ್ತಿಗೆದಾರ ಪದ್ಧತಿಯನ್ನು ನಿಲ್ಲಿಸುವಂತೆ ನಾವು ದೇಶದ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.

ಅಲ್ಲದೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಹಿತಿ ಸೇವಾ ಸಮಿತಿ ವತಿಯಿಂದ ಮುಂದಿನ ಮಾ.23ರಂದು ಅಣ್ಣಾ ಹಜಾರೆ ನೇತೃತ್ವದಲ್ಲಿ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದೂ ಕೋಟೆಯಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿಬು ಕೆ.ಜೋರ್ಜ್, ನರಸಿಂಹ ಮೂರ್ತಿ, ಧರ್ಮಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News