ಉಡುಪಿ: ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮ ಉದ್ಘಾಟನೆ
ಉಡುಪಿ, ಜ.26: ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೃಷಿ ಇಲಾಖೆ ಮತ್ತು ಮಣ್ಣಪಳ್ಳ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಮಣ್ಣಪಳ್ಳ ನಿಸರ್ಗಧಾಮದ ಬಯಲು ಮಂದಿರದಲ್ಲಿ ಶುಕ್ರವಾರ ಆಯೋಜಿಸ ಲಾದ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮವನ್ನು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ನರಸಿಂಹ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂಥೋಣಿ ಮರಿಯಾ ಇಮಾನ್ಯುಯಲ್, ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ಚಿಚಾರಕಿ ಪೂರ್ಣಿಮಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವದಾಸ ಪೈ ಸ್ವಾಗತಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾಮೆ ಪಾಯಸ, ರಾಗಿ ಉಂಡೆ ಹಾಗೂ ನವಣೆ ಖಾದ್ಯಗಳ ರುಚಿಯನ್ನು ಸಾರ್ವಜನಿಕರು ಸವಿದರು.
ಒಟ್ಟು 18 ಕಲಾ ತಂಡಗಳಿಂದ ಚೆನ್ನು ಕುಣಿತ, ನಗಾರಿ, ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ, ಕಂಗೀಲು, ಸುಗ್ಗಿ ಕುಣಿತ, ಶಾರ್ದೂಲ ನೃತ್ಯ, ಕುಡುಬಿ ನೃತ್ಯ, ಕೊರಗರ ನೃತ್ಯ, ಸಿದ್ದಿ ಸಿಗ್ಮೂ ಕುಣಿತ, ಕರಗ ಕೋಲಾಟ, ವೀರಗಾಸೆ, ಸುಗ್ಗಿ ಕುಣಿತ, ಕೃಷಿ ಹಾಡುಗಳು ಮತ್ತು ಪಾಡ್ದನ, ಶಾರ್ದೂಲ ನೃತ್ಯ, ಬೆಸ್ತರ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು.