×
Ad

ಮಂಗಳೂರು: ಸಂವಿಧಾನದ ರಕ್ಷಣೆಗಾಗಿ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ

Update: 2018-01-26 23:28 IST

ಮಂಗಳೂರು, ಜ.26: ಕರ್ನಾಟಕ ರಾಜ್ಯ ಸುನ್ನಿ ಯುವ ಜನಸಂಘದ (ಎಸ್‌ವೈಎಸ್) ವತಿಯಿಂದ ‘ಸಂವಿಧಾನದ ಸಂರಕ್ಷಣೆಗಾಗಿ ಪ್ರಜಾಪ್ರಭುತ್ವ ಜಾಗೃತಿ ಸಮಾವೇಶ’ವು ಶುಕ್ರವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜರಗಿತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಜ್ಯ ಹಜ್ ಕಮಿಟಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ದೇಶಕ್ಕೆ ಸಂವಿಧಾನ ರಚಿಸಲ್ಪಟ್ಟು 68 ವರ್ಷಗಳಾಗುತ್ತಾ ಬಂದರೂ ಕೂಡ ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಸೃಷ್ಟಿಯಾಗಿರುವುದು ವಿಪರ್ಯಾಸ. ಸಂವಿಧಾನದ ಉತ್ತಮ ಆಶಯದ ಹೊರತಾಗಿಯೂ ಇಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದರು.

ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಸ್ವಾತಂತ್ರವನ್ನು ಸಂವಿಧಾನ ನೀಡಿದೆ. ಅದರಂತೆ ಮುಸ್ಲಿಮರು ಕೂಡ ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಚಲಾಯಿಸುತ್ತಿ ದ್ದಾರೆ. ಆದರೆ, ಇದನ್ನು ಸಹಿಸದ ಶಕ್ತಿಗಳು ಸಮಾನ ನಾಗರಿಕ ಸಂಹಿತೆಯ ಹೆಸರಿನಲ್ಲಿ ಮುಸ್ಲಿಮರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ದೇಶದ ಮಣ್ಣಿನ ಮಕ್ಕಳಾದ ಮುಸ್ಲಿಮರ ಹಜ್ ಸಬ್ಸಿಡಿಯನ್ನು ರದ್ದು ಮಾಡಿ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿಸಲಾಗಿದೆ ಎಂದು ಬಿಂಬಿಸಿ ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ವಿಷಾದನೀಯ ಎಂದು ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿಎಂಎಂ ಕಾಮಿಲ್ ಸಖಾಫಿ ಮಾತನಾಡಿ ಸಂಘಟನೆಯು ಕೇವಲ ಮಸೀದಿ-ಮದ್ರಸಗಳಿಗೆ ಸೀಮಿತವಾಗಿಲ್ಲ. ಸಮುದಾಯದ ಅಭಿವೃದ್ಧಿಗೆ ಜಾಗೃತಿಗೆ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಗಣರಾಜ್ಯೋತ್ಸವದ ದಿನವಾದ ಇಂದು ಎಲ್ಲೆಡೆ ಪ್ರಜಾಪ್ರಭುತ್ವದ ವೌಲ್ಯ ಎತ್ತಿಹಿಡಿಯಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಎಸ್ಸೆಸ್ಸೆಫ್ ನಾಯಕರಾದ ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ, ಶಾಫಿ ಸಅದಿ ಬೆಂಗಳೂರು ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಕಣಚೂರು ಮೋನು, ಕರ್ನಾಟಕ ಮುಸ್ಲಿಂ ಜಮಾಅತ್‌ನ ಕಾರ್ಯದರ್ಶಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಮಾಜಿ ಮೇಯರ್ ಕೆ.ಅಶ್ರಫ್, ಎಸ್‌ಇಡಿಸಿ ಕರ್ನಾಟಕ ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಕೆಸಿಎಫ್ ಸೌದಿ ಅರೇಬಿಯಾ ಘಟಕದ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಎಸ್‌ಎಂಎ ಕರ್ನಾಟಕ ಅಧ್ಯಕ್ಷ ಎಂಬಿ ಮುಹಮ್ಮದ್ ಸ್ವಾದಿಕ್, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಮೂಳೂರು, ಎಸ್‌ಜೆಎಂ ನಾಯಕ ಉರುಮಣೆ ಸಅದಿ, ಎಸ್ಸೆಸ್ಸೆಫ್ ನಾಯಕ ಇಸ್ಮಾಯೀಲ್ ಮಾಸ್ಟರ್, ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News