×
Ad

'ನಮ್ಮ ಮಗನಿಗೆ ತೊಂದರೆ ಆದರೆ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಪೊಲೀಸರು ನೇರ ಕಾರಣ'

Update: 2018-01-27 18:57 IST

ಬಂಟ್ವಾಳ, ಜ. 27: ಕಲ್ಲಡ್ಕ, ಗೋಳ್ತಮಜಲು ಗ್ರಾಮದ ಹೊಸಮನೆ ನಿವಾಸಿ ಮಿಥುನ್ ವಿರುದ್ಧ ಸುಳ್ಳು ಕೇಸು ದಾಖಲಿಸಿ, ವಿನಾಃ ಕಾರಣ ತೊಂದರೆ ನೀಡುತ್ತಿದ್ದಾರೆ. ಮಿಥುನ್‌ಗೆ ಯಾವುದೇ ತೊಂದರೆ ಆದರೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೊಲೀಸರೇ ನೇರ ಕಾರಣ ಎಂದು ಮಿಥುನ್ ಪೋಷಕರು ಆರೋಪಿಸಿದ್ದಾರೆ.

ಶನಿವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಿಥುನ್ ತಂದೆ ನಾರಾಯಣ ಪೂಜಾರಿ ಹಾಗೂ ತಾಯಿ ಲಲಿತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಿಥುನ್ ಹಿಂದೂ ಧರ್ಮ ನಿಷ್ಠೆಯನ್ನು ಸಹಿಸದ ಕಲ್ಲಡ್ಕ ಪರಿಸರದ ಮತಾಂಧ ಶಕ್ತಿಗಳು ಆತನ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಆತ ಯಾವುದೇ ಗಲಭೆಯಲ್ಲಿ ಪಾಲ್ಗೊಳ್ಳದೆ ಇದ್ದರೂ, ವಿವಿಧ ಪ್ರಕರಣಗಳಡಿ ಹಲವು ಬಾರಿ ಆತನ ಬಂಧನವಾಗಿದೆ. ಅಲ್ಲದೆ ಪೊಲೀಸರು ರಾಜಕೀಯ ಪ್ರಭಾವಕ್ಕೊಳಗಾಗಿ ಹೆಚ್ಚಿನ ತೊಂದರೆ ನೀಡುತ್ತಿದ್ದಾರೆ, ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿರಿವುದಾಗಿ ಅವರು ತಿಳಿಸಿದರು.

ರಾಜಕೀಯ ಒತ್ತಡದಿಂದಾಗಿ ಬಶೀರ್ ಹತ್ಯೆ ಪ್ರಕರಣದಲ್ಲಿ ಮಗನನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಮಿಥುನ್ ಜೈಲಿಗೆ ಹೋಗುವ ಮೊದಲು ಕಾಂಗ್ರೆಸ್ ಪಕ್ಷದವರು ಹಣದ ಆಮಿಷ ಒಡ್ಡಿ ಪಕ್ಷ ಸೇರಿದರೆ ಎಲ್ಲ ಕೇಸು ಖುಲಾಸೆಗೊಳಿಸುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದ ಪೋಷಕರು, ಮಗನಿಗೆ ತೀವ್ರ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಆತನ ವಿರುದ್ಧದ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕೆಂದು ಗೃಹ ಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಿಥುನ್ ಸಹೋದರ ಪವನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News