ಕಾಬೂಲ್ ನಲ್ಲಿ ಕಾರ್ ಬಾಂಬ್ ಸ್ಫೋಟ: 63 ಮಂದಿ ಮೃತ್ಯು

Update: 2018-01-27 15:38 GMT

ಕಾಬೂಲ್,ಜ.27: ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪೊಲೀಸ್ ತನಿಖಾ ಠಾಣೆಯೊಂದರ ಬಳಿ ಶನಿವಾರ ಬೆಳಿಗ್ಗೆ ಆತ್ಮಹತ್ಯಾ ಬಾಂಬರ್‌ನೋರ್ವ ಸ್ಫೋಟಕಗಳಿಂದ ತುಂಬಿದ್ದ ಆ್ಯಂಬುಲನ್ಸ್‌ನ್ನು ಸ್ಫೋಟಿಸಿದ ಪರಿಣಾಮ 63 ಜನರು ಸಾವನ್ನಪ್ಪಿದ್ದು, ಇತರ 151 ಜನರು ಗಾಯಗೊಂಡಿದ್ದಾರೆ. ವಿದೇಶಿ ರಾಯಭಾರಿ ಕಚೇರಿಗಳು ಮತ್ತು ಸರಕಾರಿ ಕಟ್ಟಡಗಳಿರುವ ಪ್ರದೇಶದ ಸಮೀಪ ಈ ದಾಳಿ ನಡೆದಿದೆ ಎಂದು ಸಾರ್ವಜನಿಕ ಆರೋಗ್ಯ ಸಚಿವಾಲಯವು ತಿಳಿಸಿದೆ.

ತಾಲಿಬಾನ್ ಭಯೋತ್ಪಾದನೆಯ ವಕ್ತಾರ ಝಬಿಯುಲ್ಲಾ ಮುಜಾಹಿದ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಕಳೆದ ವಾರವಷ್ಟೇ ಕಾಬೂಲ್‌ನ ಪ್ರತಿಷ್ಠಿತ ಇಂಟರ್‌ಕಾಂಟಿನೆಂಟಲ್ ಹೋಟೆಲ್‌ನ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 20ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು.

 ‘ಇದೊಂದು ನರಮೇಧ’ ಎಂದು ಘಟನಾ ಸ್ಥಳದ ಸಮೀಪವೇ ತುರ್ತು ಸಂದರ್ಭ ಗಳಿಗಾಗಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಟಲಿಯ ನೆರವು ಸಂಸ್ಥೆ ಎಮರ್ಜನ್ಸಿಯ ವಕ್ತಾರರು ತಿಳಿಸಿದರು. ತಮ್ಮ ಆಸ್ಪತ್ರೆಯೊಂದರಲ್ಲೇ 50ಕ್ಕೂ ಅಧಿಕ ಗಾಯಾಳುಗಳು ದಾಖಲಾಗಿದ್ದಾರೆ ಎಂದು ಅವರು ಟ್ವೀಟಿಸಿದ್ದಾರೆ.

ಹೈ ಪೀಸ್ ಕೌನ್ಸಿಲ್‌ನ ಕಚೇರಿ ಮತ್ತು ಹಲವಾರು ವಿದೇಶಿ ರಾಯಭಾರಿ ಕಚೇರಿಗಳಿಗೆ ಸಮೀಪವಿರುವ ತನಿಖಾ ಠಾಣೆಯ ಬಳಿ ಆ್ಯಂಬುಲನ್ಸ್ ಸ್ಫೋಟಿಸಿದೆ ಎಂದು ಘಟನೆ ನಡೆದಾಗ ಸಮೀಪವೇ ಇದ್ದ ಸಂಸತ್ ಸದಸ್ಯ ಮಿರ್ವೈಸ್ ಯಾಸಿನಿ ತಿಳಿಸಿದರು.

ಆತ್ಮಹತ್ಯಾ ಬಾಂಬರ್ ತನಿಖಾ ಠಾಣೆಗಳನ್ನು ಸುಲಭವಾಗಿ ದಾಟಲು ಆ್ಯಂಬುಲನ್ಸ್ ಬಳಸಿದ್ದ. ಜಮುರಿಯೇಟ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದೇನೆ ಎಂದು ಹೇಳಿಕೊಂಡು ಮೊದಲ ತನಿಖಾ ಠಾಣೆಯನ್ನು ಆತ ದಾಟಿದ್ದ. ಆದರೆ ಎರಡನೇ ತನಿಖಾ ಠಾಣೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಹಾಕಿಕೊಂಡಾಗ ಆತ ಸ್ಫೋಟಕಗಳಿಂದ ತುಂಬಿದ್ದ ಆ್ಯಂಬುಲನ್ಸ್‌ನ್ನು ಸ್ಫೋಟಿಸಿದ್ದ ಎಂದು ಆಂತರಿಕ ಸಚಿವಾಲಯದ ಉಪವಕ್ತಾರ ನಸ್ರತ್ ರಹೀಮಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ನಗರದ ಹೃದಯಭಾಗದಲ್ಲಿ ಸಂಭವಿಸಿದ್ದ ಈ ಭೀಕರ ಸ್ಫೋಟದಿಂದಾಗಿ ಕಪ್ಪುಹೊಗೆ ಎಲ್ಲೆಲ್ಲೂ ತುಂಬಿಕೊಂಡಿದ್ದು, ನೂರಾರು ಮೀಟರ್ ದೂರದಲ್ಲಿಯ ಕಟ್ಟಡಗಳು ನಡುಗಿದ್ದವು.

ಸಮೀಪದ ಆಸ್ಪತ್ರೆಯೊಂದರಲ್ಲಿ ಬಹಳಷ್ಟು ಮೃತರನ್ನು ಮತ್ತು ಗಾಯಾಳುಗಳನ್ನು ನೋಡಿದ್ದಾಗಿ ಸುದ್ದಿಸಂಸ್ಥೆಯೊಂದರ ವರದಿಗಾರ ತಿಳಿಸಿದ. ಘಟನಾ ಸ್ಥಳಕ್ಕೆ ಸಮೀಪವಿರುವ ಪ್ರಸಿದ್ಧ ಸ್ಟೇಷನರಿ ಮಳಿಗೆಯೊಂದರ ಕಿಟಕಿಗಳ ಗಾಜುಗಳು ಹುಡಿಯಾಗಿದ್ದು, ಕೆಲವು ಚಿಕ್ಕಪುಟ್ಟ ಕಟ್ಟಡಗಳು ಕುಸಿದಿವೆ.

ಶನಿವಾರ ಬೆಳಿಗ್ಗೆ ವಿದೇಶಿ ಪ್ರಜೆಗಳಿಗಾಗಿ ಹೊರಡಿಸಲಾಗಿರುವ ಸುರಕ್ಷತಾ ಸೂಚನೆಯಲ್ಲಿ, ಇತ್ತೀಚಿನ ತಿಂಗಳುಗಳಲ್ಲಿ ನಗರದಲ್ಲಿ ಭೀತಿಯನ್ನು ಸೃಷ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ವಿದೇಶಿಯರು ಆಗಾಗ್ಗೆ ಭೇಟಿ ನೀಡುವ ಸುಪರ್ ಮಾರ್ಕೆಟ್‌ಗಳು, ಅಂಗಡಿಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿಗಳನ್ನು ನಡೆಸಲು ಹೊಂಚು ಹಾಕುತ್ತಿದೆ ಎಂಬ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News