ಉಡುಪಿ: ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಕ್ರೀಡಾಕೂಟ ಉದ್ಘಾಟನೆ
ಉಡುಪಿ, ಜ.27: ಪ್ರತಿದಿನವೂ ಒತ್ತಡದಲ್ಲೇ ಕೆಲಸ ಮಾಡುವ ಸಿಬ್ಬಂದಿಗಳ ದೈಹಿಕ ಹಾಗೂ ಮಾನಸಿಕ ನೆಮ್ಮದಿಗೆ ಕ್ರೀಡೆ ಸಹಕಾರಿ ಎಂದು ಕೊಲ್ಲೂರು ಶ್ರೀಮುಕಾಂಬಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತಿದ್ದರು. ಆಧುನಿಕ ಜಗತ್ತಿನಲ್ಲಿ ನಮ್ಮ ಇಂದಿನ ಜೀವನಕ್ರಮವೇ ಬದಲಾಗಿದೆ. ಇದು ಹಲವು ಕಾಯಿಲೆಗಳಿಗೆ ನಮ್ಮನ್ನು ನೂಕುತ್ತವೆ. ಹೀಗಾಗಿ ಬಿಡುವಿನ ಅವಧಿಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಕ್ರೀಡೆಯಿಂದ ದೈಹಿಕ, ಮಾನಸಿಕ ನೆಮ್ಮದಿಯ ಜತೆಗೆ ಶಿಸ್ತು, ನಾಯಕತ್ವ, ಪರಸ್ಪರ ಸಹಕಾರ, ತ್ಯಾಗದ ಮನೋಭಾವ ಮೈಗೂಡುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಅಧ್ಯಕ್ಷ ಜಯರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಹೆಗ್ಡೆ, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೋವಿನ್ ಡಿಸೋಜ, ಕೋಶಾಧಿಕಾರಿ ಚಂದ್ರಹಾಸ, ಜತೆ ಕಾರ್ಯದರ್ಶಿ ಕರುಣಾಕರ, ಸಂಘಟನಾ ಕಾರ್ಯರ್ಶಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ನಿರ್ದೇಶಕ ವರದರಾಜ ಎನ್.ಶೆಟ್ಟಿ ಸಿಬ್ಬಂದಿಗೆ ಹಾಗೂ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟದ ಕ್ರೀಡಾ ಕಾರ್ಯದರ್ಶಿ ಜಯಂತ್ ಕುಮಾರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.