×
Ad

ಜ.28 : ಬಸ್ರೂರಿನಲ್ಲಿ ಪ್ರೊ ಕಬಡ್ಡಿ, ಹಗ್ಗಜಗ್ಗಾಟ

Update: 2018-01-27 20:06 IST

ಕುಂದಾಪುರ, ಜ.27: ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಏಕತಾ ಯುವಕ ಮಂಡಲ ಕೋಳ್ಕೆರೆ ಬಸ್ರೂರು ಇವರ ವತಿಯಿಂದ ಜ.28 ರಂದು ಕುಂದಾಪುರ ವಿಧಾನಸಬಾ ಕ್ಷೇತ್ರ ಮಟ್ಟದಲ್ಲಿ ಪುರುಷರಿಗಾಗಿ ಪ್ರೊ ಕಬಡ್ಡಿ ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ.

ಇದೇ ದಿನ ಇಂಟಕ್ ಕುಂದಾಪುರ ಹಾಗೂ ಏಕತಾ ಯುವಕ ಮಂಡಲ ಜಂಟಿ ಆಶ್ರಯದಲ್ಲಿ ಕುಂದಾಪುರ ವಿಧಾನಸಬಾ ಕ್ಷೇತ್ರಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯು ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗದಡಿ ನಡೆಯಲಿದೆ. ಎರಡೂ ವಿಭಾಗದಲ್ಲಿ ಪ್ರಶಸ್ತಿ ವಿಜೇತ ತಂಡಕ್ಕೆ 10,000ರೂ. ನಗದು, ರನ್ನರ್‌ಅಪ್‌ಗೆ 6,000 ರೂ., ಮೂರು ಮತ್ತು ನಾಲ್ಕನೇ ಸ್ಥಾನಿ ತಂಡಗಳಿಗೆ ತಲಾ 3000ರೂ. ನೀಡಲಾಗುವುದು.

ಕಬಡ್ಡಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ಬಸ್ರೂರಿನ ಕೋಳ್ಕೆರೆ ಬಾಲಕೃಷ್ಣ ಹೆಗ್ಡೆ ಕ್ರೀಡಾಂಗಣದಲ್ಲಿ ಅಪರಾಹ್ನ 2:30ಕ್ಕೆ ಆರಂಭಗೊಳ್ಳಲಿದೆ ಎಂದು ಇಂಟಕ್ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ ತಿಳಿಸಿದ್ದಾರೆ.

ಶಿಬಿರ: ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇತ್ತೀಚೆಗೆ ನಡೆದ ಹಲವು ಟೂರ್ನಿಗಳಲ್ಲಿ ಭಾಗವಹಿಸಿದ ತಂಡಗಳ ಉತ್ತಮ 30 ಮಂದಿ ಆಟಗಾರರನ್ನು ಆಯ್ಕೆ ಮಾಡಿ ಯು-ಮುಂಬೈ ತಂಡದ ಮುಖ್ಯ ತರಬೇತುದಾರ ರವಿಶೆಟ್ಟಿ ಇವರಿಂದ ಉಚಿತ ತರಬೇತಿಯನ್ನು ಸಂಸ್ಥೆಯ ವತಿಯಿಂದ ನಡೆಸಲು ತೀರ್ಮಾನಿಸಲಾಗಿದೆ.

ಅಲ್ಲದೇ ಮುಂದಿನ ದಿನಗಳಲ್ಲಿ ಕುಂದಾಪುರ ವಿಧಾನಸಬಾ ಕ್ಷೇತ್ರದಾದ್ಯಂತ ಗ್ರಾಮಮಟ್ಟದಲ್ಲಿ ಕಬಡ್ಡಿ ಸ್ಪರ್ಧೆಗಳನ್ನು ನಡೆಸಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಪ್ರೊ ಕಬಡ್ಡಿ ಹಾಗೂ ರಾಜ್ಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಕಲ್ಪಿಸಲಾಗುವುದು ಎಂದು ರಾಕೇಶ್ ಮಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News