5 ದಶಕಗಳಿಗೂ ಹೆಚ್ಚುಕಾಲ ಬದುಕಿದ್ದ ಗೊರಿಲ್ಲಾ ಮೃತ್ಯು
ಸಾನ್ ಡಿಯಾಗೊ (ಅಮೆರಿಕ), ಜ. 27: ಜಗತ್ತಿನ ಅತ್ಯಂತ ಹಿರಿಯ ಗೊರಿಲ್ಲಾಗಳ ಪೈಕಿ ಒಂದಾಗಿರುವ ಗೊರಿಲ್ಲಾವೊಂದು ಅಮೆರಿಕದ ಸಾನ್ ಡಿಯಾಗೊ ಪ್ರಾಣಿ ಸಂಗ್ರಹಾಲಯದ ಸಫಾರಿ ಪಾರ್ಕ್‌ನಲ್ಲಿ ಕೊನೆಯುಸಿರೆಳೆದಿದೆ.
ವಿಲಾ ಎಂಬ ಹೆಣ್ಣು ಗೊರಿಲ್ಲಾ ಗುರುವಾರ ಮೃತಪಟ್ಟಿದೆ. ಅದರ ಕೊನೆಯ ಕ್ಷಣಗಳಲ್ಲಿ ಅದರ ಕುಟುಂಬ ಸದಸ್ಯರು ಸುತ್ತ ನೆರೆದಿದ್ದರು ಎಂದು ಸಫಾರಿ ಪಾರ್ಕ್ ಹೇಳಿದೆ.
ವಿಲಾ ಅಕ್ಟೋಬರ್‌ನಲ್ಲಿ 60ನೆ ವರ್ಷಕ್ಕೆ ಕಾಲಿಟ್ಟಿತ್ತು.
ಐದು ತಲೆಮಾರುಗಳ ಗೊರಿಲ್ಲಾಗಳಿಗೆ ವಿಲಾ ಹಿರಿಯಳಾಗಿತ್ತು. ತನ್ನ ಜೀವಿತಾವಧಿಯಲ್ಲಿ ಅದು ಹಲವಾರು ಪಾಶ್ಚಿಮಾತ್ಯ ಲೋಲ್ಯಾಂಡ್ ಗೊರಿಲ್ಲಾಗಳಿಗೆ ಬಾಡಿಗೆ ತಾಯಿ (ಸರೋಗೇಟ್ ಮದರ್) ಆಗಿ ಸೇವೆ ಮಾಡಿತ್ತು.
ಗೊರಿಲ್ಲಾಗಳು ಸಾಮಾನ್ಯವಾಗಿ 35ರಿಂದ 40 ವರ್ಷಗಳ ಕಾಲ ಬದುಕುತ್ತವೆ.
ರೋಗ, ಬೇಟೆ, ಯುದ್ಧ ಮತ್ತು ವಾಸಸ್ಥಾನ ನಾಶಗಳ ಹಿನ್ನೆಲೆಯಲ್ಲಿ ಗೊರಿಲ್ಲಾಗಳನ್ನು ಅತ್ಯಂತ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳೆಂಬುದಾಗಿ ಪರಿಗಣಿಸಲಾಗಿದೆ.
ವಿಲಾ ಗಂಟುನೋವು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿತ್ತು.
ಅದು ಕಾಂಗೊದಲ್ಲಿ 1957ರಲ್ಲಿ ಜನಿಸಿತು. 1959ರಲ್ಲಿ ಅದನ್ನು ಸಾನ್ ಡಿಯಾಗೊ ಪ್ರಾಣಿ ಸಂಗ್ರಹಾಲಯಕ್ಕೆ ತರಲಾಯಿತು. 1975ರಲ್ಲಿ ಅದನ್ನು ಸಫಾರಿ ಪಾರ್ಕ್‌ಗೆ ಕರೆದೊಯ್ಯಲಾಯಿತು.