ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಹಿತ್ಯ ಸಹಕಾರಿ: ರೆ.ಫಾ.ಮೆಲ್ವಿನ್
ಮಂಗಳೂರು, ಜ.27: ಕರ್ನಾಟಕದಲ್ಲಿ ಬಹುಭಾಷೆಗಳು ಅಸ್ಥಿತ್ವದಲ್ಲಿರುವುದು ಜನತೆಯ ದೌರ್ಬಲ್ಯ ಅಲ್ಲ. ಅದು ನಮ್ಮ ಶಕ್ತಿ. ಹಾಗಿದ್ದೂ ಕರಾವಳಿಯ ಬಹು ಭಾಷಾ ಸಮಾಜದಲ್ಲಿ ಸ್ವಾಸ್ಥ್ಯ ಕಡಿಮೆಯಾಗುತ್ತಿದೆ. ಸಾಹಿತ್ಯ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲ ರೆ.ಫಾ.ಮೆಲ್ವಿನ್ ಹೇಳಿದರು.
ನಗರದ ಅಲೋಶಿಯಸ್ ಕಾಲೇಜಿನಲ್ಲಿ ಸಾಹಿತ್ಯ ಸಮುದಾಯ ಮಂಗಳೂರು ಮತ್ತು ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಬಹುಭಾಷಾ ಸೌಹಾರ್ದ ಕವಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಮಾತ್ರವಲ್ಲದೆ ನಮ್ಮ ಪರಿಸರದ ತುಳು, ಕನ್ನಡ, ಬ್ಯಾರಿ, ಕೊಡವ ಭಾಷೆಗಳಲ್ಲಿಯೂ ಸಮೃದ್ಧವಾದ ಸಾಹಿತ್ಯವಿದೆ. ಸಾಹಿತ್ಯದಲ್ಲಿ ಕಾವ್ಯವು ವಿಶೇಷವಾದ ಗುಣವುಳ್ಳದ್ದು. ಕಾವ್ಯದ ಆತ್ಮ ಧ್ವನಿ ಎಂಬುದಾಗಿ ಶತಮಾನಗಳ ಹಿಂದೆ ಆನಂದ ವರ್ಧನ ಹೇಳಿದ್ದಾನೆ. ಆಧುನಿಕ ಕಾಲದಲ್ಲಿ ಕನ್ನಡದಲ್ಲಿ ಮೂಡಿ ಬಂದ ನವೋದಯ, ನವ್ಯ, ದಲಿತ-ಬಂಡಾಯ ಕಾವ್ಯ ಪ್ರಕಾರಗಳೂ ಭಿನ್ನ ಭಿನ್ನವಾದ ಕಾವ್ಯ ಧ್ವನಿಯನ್ನು ಹೊರಡಿಸಿವೆ. ದಮನಿತರ ಧ್ವನಿಯಾಗಿ ದಲಿತ ಬಂಡಾಯ ಕಾವ್ಯ ಬಂದಿದೆ ಎಂಬುದು ಗಮನಾರ್ಹ ಎಂದು ರೆ.ಫಾ.ಮೆಲ್ವಿನ್ ಹೇಳಿದರು.
ಕವಿಗೋಷ್ಠಿಯಲ್ಲಿ ಮುಹಮ್ಮದ್ ಬಡ್ಡೂರ್, ಡಾ.ವಾಮನ ನಂದಾವರ, ಗುಲಾಬಿ ಬಿಳಿಮಲೆ, ಶಾರದಾ ಶೆಟ್ಟಿ, ಡಾ.ಸಂಪೂರ್ಣಾನಂದ ಬಳ್ಕೂರು, ಶ್ರೀನಿವಾಸ ಹಕ್ಕೀಮರಿ, ರಘು ಇಡ್ಕಿದು, ಮಹಮ್ಮದ್ ಶರೀಫ್, ಸತೀಶ್ ಕಕ್ಕೆಪದವು, ಜ್ಯೋತಿ ಚೇಳಾಯಾರು ಮತ್ತಿತರ ಕವಿಗಳು ತುಳು, ಕನ್ನಡ ಕವಿತೆಗಳನ್ನು ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಲೇಖಕಿ ಚಂದ್ರಕಲಾ ಮಾತನಾಡಿ ಸಾಹಿತ್ಯ ಕ್ರಿಯೆಯಾಗಬೇಕು, ತಟಸ್ಥವಾಗಿರುವುದು ನಮ್ಮ ಷಂಡತನವಾಗಿ ರುತ್ತದೆ. ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಮಾನವೀಯತೆ ನಮ್ಮೊಳಗಿದ್ದಲ್ಲಿ ಯಾರೂ ನಮ್ಮನ್ನು ಬೆದರಿಸಲಾರರು. ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರು ನಮ್ಮ ಆದರ್ಶಗಳಲ್ಲ. ನಾವು ಅನುಸರಿಸಬೇಕಾದುದು ನಮ್ಮ ಒಳದನಿಯನ್ನು ಎಂದು ಹೇಳಿದರು.
ಸಾಹಿತ್ಯ ಸಮುದಾಯದ ಸಂಚಾಲಕ ಡಾ.ಆರ್.ನಾಗಪ್ಪಗೌಡ ಪ್ರಸ್ತಾವನೆಗೈದರು. ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಮುಖ್ಯಸ್ಥೆ ಡಾ.ಕೆ.ಸರಸ್ವತಿ ಸ್ವಾಗತಿಸಿದರು. ಲೇಖಕಿ ಜ್ಯೋತಿ ಚೇಳಾಯಾರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಅಧ್ಯಕ್ಷೆ ಸುಧಾ ವಂದಿಸಿದರು.