ವಿದ್ಯಾರ್ಥಿನಿಯ ಸಂಶಯಾಸ್ಪದ ಮೃತ್ಯು: ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ
ಮಂಗಳೂರು, ಜ.27: ಕೆ.ಆರ್.ಪೇಟೆಯ ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯ 8ನೆ ತರಗತಿಯ ವಿದ್ಯಾರ್ಥಿನಿ ಝೈಬುನ್ನಿಸಾರ ಸಂಶಯಾಸ್ಪದ ಮೃತ್ಯು ಪ್ರಕರಣಕ್ಕೆ ಶಾಲೆಯ ಶಿಕ್ಷಕ ರವಿ ಎನ್.ಎಸ್. ಎಂಬಾತನೇ ಕಾರಣ ಎಂದು ಕೆ.ಆರ್. ಪೇಟೆ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಎಸ್‌ಎಫ್‌ಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.
ಶಿಕ್ಷಕ ರವಿ ಮೂರು ತಿಂಗಳಿನಿಂದ ಜಾತಿ ನಿಂದನೆಗೈದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ವಿನಾ ಕಾರಣ ಹಿಯಾಳಿಸಿ ವಿದ್ಯಾರ್ಥಿನಿಯರ ಎದುರೇ ಅವಮಾನ ಮಾಡುತ್ತಿದ್ದು, ಕೂದಲಿನ ಜುಟ್ಟು ಹಿಡಿದು ಹೊರಗೆ ತಂದು ಗೋಡೆಗೆ ಬಡಿಯುತ್ತಿದ್ದರು ಎಂದು ಝೈಬುನ್ನೀಸಾ ತನ್ನ ತಾಯಿಯಲ್ಲಿ ಹೇಳಿಕೊಂಡಿದ್ದಾಳೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಆಳ್ವಾಸ್ ಕಾಲೇಜಿನ ರಚನಾಳ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಇದರ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚರಣ್ ಪಂಜಿಮೋಗರು ಮತ್ತು ಕಾರ್ಯದರ್ಶಿ ಮಾಧುರಿ ಬೋಳಾರ್ ಒತ್ತಾಯಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ: ವಿದ್ಯಾರ್ಥಿನಿ ಝೈಬುನ್ನಿಸಾರ ಸಂಶಯಾಸ್ಪದ ಮೃತ್ಯು ಪ್ರಕರಣವನ್ನು ಸರಕಾರ ಲಘುವಾಗಿ ಪರಿಗಣಿಸಬಾರದು. ಇದರಿಂದ ಶಿಕ್ಷಣಕ್ಕಾಗಿ ಹೆತ್ತವರಿಂದ ದೂರವಿದ್ದು ವಸತಿ ಶಾಲೆ ಸೇರುವ ವಿದ್ಯಾರ್ಥಿನಿಯರಲ್ಲಿ ಆತಂಕ, ಅಭದ್ರತೆ ಕಾಡಬಹುದು. ಆರೋಪಿ ಶಿಕ್ಷಕ ರವಿಯನ್ನು ಬಂಧಿಸಿ ಕಾನೂನು ಕ್ರಮ ಜರಗಿಸಿದರೆ ಸಾಲದು. ಅಮಾನತು ಕೂಡ ಆತನಿಗೆ ಶಿಕ್ಷೆಯಾಗದು. ವೃತ್ತಿಯಿಂದ ವಜಾಗೊಳಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಇಂತಹ ಶಿಕ್ಷಕರು ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ವೃತ್ತಿಗೆ ಕಳಂಕವಾಗಿದ್ದು, ರವಿಯಂತಹವರು ಶಿಕ್ಷಕನಾಗಿ ಮುಂದುವರಿಯುವುದು ಶಿಕ್ಷಣ ಇಲಾಖೆಗೆ ಶೋಭೆಯಲ್ಲ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಆಲಿ ಹಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.