ನಾವು ಮಾಡುವ ವೃತ್ತಿಯನ್ನು ಪ್ರೀತಿಸಿದಾಗ ಅದು ನಮಗೆ ಗೌರವ ನೀಡುತ್ತದೆ: ಸಚಿವ ರೈ
ಬಂಟ್ವಾಳ, ಜ. 27: ನಾವು ಮಾಡುವ ವೃತ್ತಿಯನ್ನು ಪ್ರೀತಿಸಿದಾಗ ಅದು ನಮಗೆ ಗೌರವವನ್ನು ನೀಡುತ್ತದೆ. ಅಲ್ಲದೆ ವೃತ್ತಿಯಲ್ಲಿ ಉನ್ನತ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರ ಸಾಧನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ ಬೆರೆಯುವ ವ್ಯಕ್ತಿತ್ವದ ರಮೇಶ್ ನಾಯಕ್ ಅವರದ್ದು, ತಾನು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿರುವುದಲ್ಲದೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುವಂತೆ ಮಾಡಿದವರು ಎಂದರು.
ರಮೇಶ್ ನಾಯಕ್ ಅವರು ಆಯೋಜಿಸುವ ಶಾಲಾ ಆರಂಭೋತ್ಸವ ಕಾರ್ಯಕ್ರಮಗಳನ್ನು ತನ್ನ ಜೀವಮಾನದಲ್ಲಿ ಎಲ್ಲೂ ಕಂಡಿಲ್ಲ. ಅಲ್ಲದೆ, ಕೆದ್ದಳಿಕೆ ಶಾಲೆಗೆ ರಾಷ್ಟ್ರಮಟ್ಟದ ಹೆಗ್ಗಳಿಕೆ ತಂದುಕೊಟ್ಟವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ರಮೇಶ್ ನಾಯಕ್ ಅವರ ಶಿಕ್ಷಕ ಚಂದ್ರಶೇಖರ ಭಟ್ ಅವರಿಗೆ ಗುರುವಂದನೆ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ರಮೇಶ್ ನಾಯಕ್ ಮಾತನಾಡಿ, ವೃತ್ತಿ ಜೀವನದಲ್ಲಿ ಜನರ ಪ್ರೀತಿ, ವಿಶ್ವಾಸ, ಆತ್ಮೀಯತೆಯನ್ನು ಗಳಿಸಿಕೊಂಡಿದ್ದೇನೆ. ತಾನು ಈ ಎತ್ತರಕ್ಕೆ ಏರಬೇಕಾದರೆ ಅದು ನನ್ನೊಬ್ಬನ ಸಾಧನೆ ಮಾತ್ರವಲ್ಲ. ಎಲ್ಲರ ಸಹಕಾರದಿಂದ ಸಾಕಾರವಾಗಿದೆ ಎಂದರು.
ಎಂದೂ ಪ್ರಶಸ್ತಿಯನ್ನು ಬಯಸಿದವನಲ್ಲ. ಅದಕ್ಕಾಗಿ ಜನಪ್ರತಿನಿಧಿಗಳ ಹಿಂದೆ ಹೋದವನೂ ಅಲ್ಲ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನೋರ್ವ ನಿವೃತ್ತಿ ಹೊಂದಿದಾಗ ಅದ್ದೂರಿ ಕಾರ್ಯಕ್ರಮ ಮಾಡಿ ಗೌರವಿಸಿರುವುದು ಬಂಟ್ವಾಳದ ಇತಿಹಾಸದಲ್ಲಿಯೇ ಇದು ಮೊದಲು ಎಂದರು.
ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ರಮೇಶ್ ನಾಯಕ್ ಮತ್ತು ರಾಯಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ರಮೇಶ್ ನಾಯಕ್ ಮತ್ತು ಸಾಮಾಜಿಕ ಜೀವನ ಕುರಿತು ವಿಷಯ ಮಂಡಿಸಿದರು.
ಜಿಪಂ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ ಶೆಟ್ಟಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ರಾವ್, ಸಾಧನ ಸಂಭ್ರಮ ಸಮಿತಿಯ ಟಿ.ಶೇಷಪ್ಪ ಮೂಲ್ಯ ವೇದಿಕೆಯಲ್ಲಿದ್ದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ ಪ್ರಾಸ್ತಾವಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.