×
Ad

ತೆಗ್ಗು ಶಾಲೆಯ ಶೈಕ್ಷಣಿಕ ಅಭಿವೃದ್ಧಿ ರಾಜ್ಯಕ್ಕೆ ಮಾದರಿ: ಶಕುಂತಳಾ ಶೆಟ್ಟಿ

Update: 2018-01-27 23:21 IST

ಪುತ್ತೂರು, ಜ. 27: (ಓಲೆಮುಂಡೋವು ಕಮಲಾಕರಿಯಪ್ಪ ಬಂಟ ವೇದಿಕೆ, ಎರಬೈಲು ಪೂವಪ್ಪ ಗೌಡ ಸಭಾಂಗಣ) ಸರಕಾರಿ ಶಾಲೆಯನ್ನು ಅಭಿವೃದ್ದಿ ಮಾಡಲು ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಆಯಾ ಶಾಲೆಯ ಪೋಷಕರು, ವಿದ್ಯಾಭಿಮಾನಿಗಳು, ಗ್ರಾಮಸ್ಥರು ಒಟ್ಟಾಗಿ ಶಾಲೆಯತ್ತ ಹೆಜ್ಜೆ ಹಾಕಿದರೆ ಶಾಲೆ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಇದಕ್ಕೆ ಕೆಯ್ಯೂರು ಗ್ರಾಮದ ತೆಗ್ಗು ಶಾಲೆಯ ಅಭಿವೃದ್ದಿಯೇ ಸಾಕ್ಷಿಯಾಗಿದೆ. ತೆಗ್ಗು ಶಾಲೆಯ ಶೈಕ್ಷಣಿಕ ಅಭಿವೃದ್ಧಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಶನಿವಾರ ಕೆಯ್ಯೂರು ಗ್ರಾಮದ ತೆಗ್ಗು ಸರಕಾರಿ ಪ್ರಾಥಮಿಕ ಶಾಲೆಯ ಸುವರ್ಣಮಹೋತ್ಸವ ‘ತೆಗ್ಗುತೇರು ಚಿನ್ನದ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸಂಖ್ಯೆಯ ಕೊರತೆ ಮತ್ತು ಶಿಥಿಲಗೊಂಡ ಕಟ್ಟಡವನ್ನು ಹೊಂದಿದ್ದ ತೆಗ್ಗು ಶಾಲೆ ಒಂದು ಹಂತದಲ್ಲಿ ಮುಚ್ಚುವ ಭೀತಿಯಲ್ಲಿತ್ತು. ಈ ವೇಳೆ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಶಾಲೆಯ ಜಗಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಯಾವಾಗ ಈ ಶಾಲೆಗೆ ಇಲಾಖೆ ಉತ್ತಮ ಶಿಕ್ಷಕರನ್ನು ನೀಡಿತೋ ಆ ಬಳಿಕ ಶಾಲೆ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರುತ್ತಲೇ ಬಂತು. ಶಿಕ್ಷಕರು ಕೇವಲ ಮಕ್ಕಳಿಗೆ ಪಾಠ ಮಾಡುವುದಕ್ಕೆ ಸೀಮಿತ ಎಂಬವಾದ ಸರಿಯಲ್ಲ. ಶಿಕ್ಷಕ ವರ್ಗ ಮನಸ್ಸು ಮಾಡಿದರೆ ಒಂದು ಶಾಲೆಯನ್ನು ಹೇಗೆ ಅಭಿವೃದ್ದಿ ಮಾಡಬಹುದು ಎಂಬುದಕ್ಕೆ ತೆಗ್ಗು ಶಾಲೆ ಮಾದರಿಯಾಗಿದೆ. ಈ ಮಾದರಿಯನ್ನು ಎಲ್ಲಾ ಶಾಲೆಯ ಶಿಕ್ಷಕರು ರೂಡಿಸಿಕೊಂಡಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಅಭಿವೃದ್ದಿ ಹೊಂದುವುದರಲ್ಲಿ ಸಂಶಯವಿಲ್ಲ. ಊರಿನ ದಾನಿಗಳು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು 25 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳನ್ನು ನಡೆಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ ತೆಗ್ಗು ಶಾಲೆಯ ಎಲ್ಲ ಅಭಿಮಾನಿಗಳ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ತಮ್ಮ ಮಕ್ಕಳು ಇಂಗ್ಲೀಷ್ ಮಾಧ್ಯದವದಲ್ಲೇ ಕಲಿಯಬೇಕು ಎಂಬ ಅತಿ ವ್ಯಾಮೋಹ ಸಲ್ಲದು. ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡ ಹಿರಿಯ ವಿದ್ವಾಂಸರು ಮಾತೃಭಾಷೆಯಲ್ಲೇ ಕಲಿತವರು. ಮಕ್ಕಳಿಗೆ ಮಾತೃ ಭಾಷೆಯ ಶಿಕ್ಷಣವನ್ನು ಪ್ರಾರಂಭದಲ್ಲಿ ನೀಡಬೇಕು. ಮಕ್ಕಳು ಬೆಳೆದಂತೆ ಇಂಗ್ಲೀಷ್ ಶಿಕ್ಷಣ ಕೊಡಿಸಿ, ಸಮೀಪದ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ಸರಕಾರಿ ಶಾಲೆಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಕೆಲಸವನ್ನು ಊರಿನ ಜನತೆ ಮಾಡಬೇಕು. ಶಾಲೆಯ ಅಧ್ಯಾಪಕರು ಒಂದಾಗಿ ಶಾಲೆಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.

ಶಾಲಾ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತೆಗ್ಗು ಶಾಲೆಯ ಅಭಿವೃದ್ದಿಗೆ ಮೊದಲಾಗಿ ಇಲ್ಲಿನ ಶಿಕ್ಷಕರು ಮತ್ತು ಊರಿನವರೇ ಕಾರಣ ಅವರನ್ನು ನಾನು ಅಬಿನಂದಿಸುತ್ತೇನೆ. ಎಲ್ಲರೂ ಒಟ್ಟಾಗಿ ಸೇರಿ ಮುಚ್ಚುವ ಸಿದ್ದತೆಯಲ್ಲಿದ್ದ ಈ ಸರಕಾರಿ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ ಇದು ಸರಕಾರದಿಂದಲೂ ಸಾಧ್ಯವಾಗದ ಕೆಲಸ. ಮುಂದಿನ ದಿನಗಳಲ್ಲಿ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಶಾಲೆಯನ್ನು ಮತ್ತಷ್ಟು ಅಭಿವೃದ್ದಿ ಮಾಡಬೇಕಿದೆ ಎಂದು ಹೇಳಿದರು.

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉದ್ಯಮಿ ಜಯಂತನಡುಬೈಲು ಮಾತನಾಡಿ ಮಕ್ಕಳಿಗೆ ಸಂಸ್ಕಾರದ ಶಿಕ್ಷಣವನ್ನು ಕಲಿಸಬೇಕು. ಉದ್ಯೋಗ ಪಡೆಯುವುದೊಂದೇ ಶಿಕ್ಷಣದ ಗುರಿಯಾಗಬಾರದು. ಮಕ್ಕಳು ಕಲಿತು ವಿದ್ಯಾವಂತರಾದರೆ ಹೆತ್ತವರನ್ನೇ ದೂರ ಮಾಡುತ್ತಾರೆ ಆ ರೀತಿಯ ಶಿಕ್ಷಣ ನಮಗೆ ಬೇಕಿಲ್ಲ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿವಿಧ ಧಾನಿಗಳಿಂದ ನಿರ್ಮಾಣಗೊಂಡ 25 ಲಕ್ಷ ಮೊತ್ತದ 25 ಕಾಮಗಾರಿಗಳನ್ನು ಅತಿಥಿಗಳು ಉದ್ಘಾಟಿಸಿದರು. ಮಕ್ಕಳ ಕಲಿಕಗೆ ಬೇಕಾದ ಎಲ್ಲಾ ಅವಶ್ಯ ಕಾಮಗಾರಿಗಳು. ಗ್ರಂಥಾಲಯ, ಕೃಷಿಚಟುವಟಿಕಾ ಕೇಂದ್ರ, ಮಕ್ಕಳ ಪಾರ್ಕಿಂಗ್, ಆವರಣಗೋಡೆ, ಗಾರ್ಡನ್, ಆಟದ ಮೈದಾನ, ದ್ವಜಸ್ಥಂಬ, ಆಧುನಿಕ ವ್ಯವಸ್ಥೆಗಳಿರುವ ವಿಧ್ಯಾರ್ಥಿ ವಿದ್ಯಾರ್ಥಿನಿಯರ ಪ್ರತ್ಯೇಕ ಶೌಚಾಲಯ, ಶಾಲಾ ಕಚೇರಿ ಕೊಠಡಿ, ಮುಖ್ಯ ದ್ವಾರ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಪ್ರಶಸ್ತಿ ಪ್ರಧಾನ ; ಈ ಸಂದರ್ಭದಲ್ಲಿ ತೆಗ್ಗುತೇರು ಚಿನ್ನದ ಹಬ್ಬದ ಪ್ರಯುಕ್ತ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಪುತ್ತೂರು ರೋಟರಿಕ್ಲಬ್ ಪೂರ್ವ ಇದರ ಅಧ್ಯಕ್ಷ ಜಯಂತ ನಡುಬೈಲು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನ ಪಿ.ವಿ ಗೋಕುಲನಾಥ ಮತ್ತು ಹೇಮಲತಾ ಗೋಕುಲನಾಥ ದಂಪತಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.

ನವೀಕೃತಗೊಂಡ ಶಾಲಾ ಕಚೇರಿ ಕೊಠಡಿಯನ್ನು ಮತ್ತು ಶೌಚಾಲಯ ವ್ಯವಸ್ಥೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ಶಾಲಾ ಮುಖ್ಯದ್ವಾರ ಹಾಗೂ ಧ್ವಜಕಟ್ಟೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ,ಕೃಷಿ ತರಬೇತಿ ಕೇಂದ್ರವನ್ನು ಪುತ್ತೂರು ಪೂರ್ವ ರೋಟರಿ ಕ್ಲಬ್ ಅಧ್ಯಕ್ಷ ಜಯಂತ ನಡುಬೈಲು, ಕಲಿಕಾ ಮನೆಯನ್ನು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್, ಮಕ್ಕಳ ಬಾಲಗೋಕುಲವನ್ನು ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯೆ ಅಮಿತಾ ಎಚ್ ರೈ ಕೂಡೇಲು ಅವರು ಉದ್ಘಾಟಿಸಿದರು, ತೆಗ್ಗು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಕೋಡಂಬು ಅವರು ಶಾಲಾ ವರದಿ ಬಿಡುಗಡೆಗೊಳಿಸಿದರು. ಇದಲ್ಲದೆ ವಿಸ್ತರಿತ ಆಟದ ಮೈದಾನ, ಕಂಪ್ಯೂಟರ್ ವ್ಯವಸ್ಥೆ, ಪ್ರಿಂಟರ್ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆಗಳ ಉದ್ಘಾಟನೆ, ಶಾಲಾ ನಾಮಫಲಕ ಅನಾವರಣ, ದಾನಿಗಳು ಕೊಡ ಮಾಡಿದ ಕುರ್ಚಿಗಳ ಉದ್ಘಾಟನೆ, ಕೈತೊಳೆಯುವ ವ್ಯವಸ್ಥೆಯ ಉದ್ಘಾಟನೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಸೇರಿದಂತೆ 25 ವಿವಿಧ ವ್ಯವಸ್ಥೆಗಳನ್ನು ಅತಿಥಿಗಳು ಉದ್ಘಾಟಿಸಿದರು.

ತೆಗ್ಗು ತೇರು ಪ್ರಶಸ್ತಿ

ಸುಮಾರು 60ರಷ್ಟು ಸರ್ಕಾರಿ ಶಾಲೆಗಳಿಗೆ ಈಗಾಗಲೇ ವಿವಿಧ ಕೊಡುಗೆಗಳನ್ನು ನೀಡಿರುವ ಹಾಗೂ 100ಕ್ಕೂ ಹೆಚ್ಚು ಬಡ ಮಕ್ಕಳನ್ನು ದತ್ತುತೆಗೆದುಕೊಂಡು ಉನ್ನತ ವಿದ್ಯಾಭ್ಯಾಸ ಕೊಡಿಸುತ್ತಿರುವ ಜಯಂತ ನಡುಬೈಲು ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ, ಅವರಿಗೆ ತೆಗ್ಗು ತೇರು ಚಿನ್ನದ ಹಬ್ಬದ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೆಗ್ಗು ಶಾಲೆಗೆ ರೂ.6 ಲಕ್ಷ ವೆಚ್ಚದಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಕೊಟ್ಟಿರುವ ಅವರನ್ನು ಸ್ಮರಿಸಲಾಯಿತು.

ಬಡವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಕೆಲಸದಲ್ಲಿ ನಿರತರಾಗಿರುವ ಹಾಗೂ ತೆಗ್ಗು ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿರುವ ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ದಾಸ್ ಮತ್ತು ಹೇಮಲತಾ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ರಮೇಶ್ ಉಳಯ ಅಭಿನಂದನಾ ಭಾಷಣ ಮಾಡಿದರು.

ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಗೌಡ ನೆಲ್ಲಿಗುರಿ, ಆರ್ಥಿಕ ಸಮಿತಿಯ ಸಂಚಾಲಕ ಭಾಸ್ಕರ ರೈ ದೇರಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ಸಾಗು, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶುಭಪ್ರಕಾಶ್ ಎರೆಬೈಲು , ಚಿನ್ನದ ಹಬ್ಬ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್ ಎರೆಬೈಲು ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ರಮೇಶ್ ಉಳಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸ್ವರಮನೆ ಶಾಲಾ ವರದಿ ವಾಚಿಸಿದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ ಸ್ವಾಗತಿಸಿದರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಎರಕ್ಕಲ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News