ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ?: ಅಮಾಯಕರ ಹತ್ಯೆಯಲ್ಲೂ ದ್ವೇಷಕಾರಿದ ಜಗದೀಶ್ ಶೇಣವ

Update: 2018-01-28 10:18 GMT

ಮಂಗಳೂರು, ಜ.28: ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರಚೌಕಿಯಲ್ಲಿ ಬಶೀರ್ ಹತ್ಯೆಯಾಗಿದೆ. ಆದ್ದರಿಂದ ಬಶೀರ್ ಹತ್ಯೆಯ ಬಗ್ಗೆ ನಮಗೇನೂ ಚಿಂತೆಯಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಪ್ರಚೋದನಾತ್ಮಕವಾಗಿ ಮಾತನಾಡಿದ ಶೇಣವ, ಮೊನ್ನೆ ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಕೊಲೆ ನಡೆಯಿತು. ಒಬ್ಬ ಅಮಾಯಕ, ಮುಗ್ದ ಮುಸ್ಲಿಮನ ಹತ್ಯೆಯಾಯಿತು ಎಂದು ಮಾಧ್ಯಮಗಳಲ್ಲಿ ಭಾರೀ ವರದಿ ಬಂತು.

"ಬಶೀರ್ ಹತ್ಯೆಗೂ ಮೊದಲು ಅಮಾಯಕ ದೀಪಕ್ ರಾವ್ ಹತ್ಯೆ ನಡೆಯಿತು. ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆಯಾದರೆ ನಮಗೇನೂ ಚಿಂತೆಯಿಲ್ಲ. ಅಶ್ರಫ್ ಕೊಲೆಯಾದದ್ದಕ್ಕೆ ಶರತ್ ಮಡಿವಾಳನ ಹತ್ಯೆ ಮಾಡಬಹುದಾದರೆ, ದೀಪಕ್ ರಾವ್ ಎನ್ನುವ ಮುಗ್ದನ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ" ಎಂದು ಪ್ರಶ್ನಿಸಿದರು.

ವಿಹಿಂಪ ನಾಯಕನ ದ್ವೇಷಕಾರುವ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. ಕೋಮುಗಲಭೆಯಿಂದ ಕರಾವಳಿ ಚೇತರಿಸಿಕೊಳ್ಳುತ್ತಿದ್ದು, ಇದೀಗ ಇಂತಹ ಬೇಜವಾಬ್ದಾರಿಯುತ, ಅನಾಗರಿಕ ಮಾತುಗಳು ದುಷ್ಕರ್ಮಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿ ಇನ್ನಷ್ಟು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಬಹುದು ಎನ್ನುವ ಆತಂಕ ಕರಾವಳಿ ಜನತೆಯದ್ದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News