ರೈತರ ಬೆಳೆಗಳ ಬೆಲೆಯ ಸ್ಥಿರೀಕರಣಕ್ಕೆ 5000 ಕೋಟಿ ರೂ. ಆವರ್ತ ನಿಧಿಗೆ ಶಿಫಾರಸ್ಸು: ಡಾ.ಕಮ್ಮರಡಿ

Update: 2018-01-28 11:38 GMT

ಉಡುಪಿ, ಜ.28: ರೈತರ ಬೆಳೆಗಳ ಖರೀದಿ ವ್ಯವಸ್ಥೆ ಸಧೃಡವಾಗಬೇಕಾದರೆ ಬೆಲೆಯ ಸ್ಥಿರೀಕರಣಕ್ಕೆ ಕನಿಷ್ಠ 5000 ಕೋಟಿ ರೂ. ಆವರ್ತ ನಿಧಿಯನ್ನು ಮೀಸಲಿರಿಸಬೇಕೆಂಬ ಶಿಫಾರಸ್ಸನ್ನು ರಾಜ್ಯ ಸರಕಾರಕ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ರವಿವಾರ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ಆಯೋಜಿಸಲಾದ ಕೃಷಿ ಮಾಹಿತಿ ಶಿಬಿರ ಮತ್ತು ವಸ್ತು ಪ್ರದರ್ಶನ ‘ರೈತ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರೈತರ ಬೆಳೆಗಳ ಧಾರಣೆ ಕುಸಿದಾಗ ರಾಜ್ಯ ಸರಕಾರ ಸಕಾಲಿಕವಾಗಿ ಖರೀದಿ ಯನ್ನು ಕೈಗೊಳ್ಳಬೇಕು. ಬೆಳೆಗಳ ಖರೀದಿಗೆ ಉನ್ನತ ಮಟ್ಟದ ವ್ಯವಸ್ಥೆಯನ್ನು ಮಾಡಬೇಕು. ಇದರಿಂದ ರೈತರ ಬೆಳೆಗಳಿಗೆ ತೃಪ್ತಿದಾಯಕ ಬೆಲೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದ 26 ಬೆಳೆಗಳ ಉತ್ಪಾದನಾ ವೆಚ್ಚ, ಅವುಗಳ ಮಾರುಕಟ್ಟೆ ಬೆಲೆ, ದೇಶ ವಿದೇಶಗಳಲ್ಲಿ ಉತ್ಪಾದನೆ ಸೇರಿದಂತೆ ಎಲ್ಲ ವಿಚಾರಗಳನ್ನು ಒಳಗೊಂಡ ಬೆಳೆಗಳ ವಸ್ತುಸ್ಥಿತಿ ವರದಿಯನ್ನು ಆಯೋಗವು ವಾರದ ಹಿಂದೆಯಷ್ಟೆ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಕಾಫಿ ಮತ್ತು ಕಬ್ಬು ಹೊರತು ಪಡಿಸಿ ರಾಜ್ಯದ ಉಳಿದ ಎಲ್ಲ ಬೆಳೆಗಳನ್ನು ಸೇರಿಸಲಾಗಿದೆ. ಈ ಮೂಲಕ ರೈತರ ಕಲ್ಯಾಣಕ್ಕೆ ಬೆಳಕು ಚೆಲ್ಲುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಇಂತಹ 8-9 ವರದಿಗಳನ್ನು ಆಯೋಗ ಸಲ್ಲಿಸಿದೆ ಎಂದರು.

ಕಳೆದ ಮೂರು ವರ್ಷಗಳಿಂದ ಆಯೋಗ ವರದಿಯನ್ನು ಆಧಾರಿಸಿ ದಾಖಲೆ 33 ಲಕ್ಷ ಕ್ವಿಂಟಾಲ್ ತೋಗರಿ, 23 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡ ಲಾಗಿದೆ. 2015-16ರಲ್ಲಿ 2100 ರೂ. ನೀಡಲಾಗಿದೆ. ಈ ವರ್ಷ ಉತ್ಪದಾನ ವೆಚ್ಚದ ಲೆಕ್ಕಚಾರ ಪ್ರಕಾರ ಒಂದು ಕ್ವಿಂಟಾಲ್ ರಾಗಿಗೆ 2300 ರೂ. ಮತ್ತು ಜೋಳಕ್ಕೆ 2100 ರೂ. ನೀಡಲಾಗಿದೆ. ಅವುಗಳನ್ನು ಖರೀದಿಸಿ ಅನ್ನಭಾಗ್ಯದಲ್ಲಿ ಕೇವಲ ಅಕ್ಕಿ ನೀಡದೆ ದಕ್ಷಿಣ ಕರ್ನಾಟಕದವರಿಗೆ ಕನಿಷ್ಠ ಐದು ಕೆ.ಜಿ. ರಾಗಿ ಮತ್ತು ಉತ್ತರ ಕರ್ನಾಟಕದವರೆಗೆ ಜೋಳ ನೀಡುವಂತೆ ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಅವರು ತಿಳಿಸಿದರು.

ಆಯೋಗದ ವರದಿಯಂತೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರ 205 ಲಕ್ಷ ಕ್ವಿಂಟಾಲ್ ವಿವಿಧ 14 ಬೆಳೆಗಳನ್ನು ಖರೀದಿಸಿದೆ. ಇದರಿಂದ 4.54 ಲಕ್ಷ ರೈತರಿಗೆ ಪ್ರಯೋಜನ ಆಗಿದೆ. ಒಬ್ಬ ರೈತನಿಂದ ತಲಾ 45 ಕ್ವಿಂಟಾಲ್ ವಿವಿಧ ಬೆಳೆಗಳು ಖರೀದಿಯಾಗಿವೆ. ಆ ಮೂಲಕ ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ 1ಲಕ್ಷ ರೂ. ವರ್ಗಾವಣೆಯಾಗಿದೆ ಎಂದು ಅವರು ಹೇಳಿದರು.

ಕಾಸರಗೋಡು ಸಿಪಿಸಿಆರ್‌ಐಯ ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಹರಿದಾಸ ರಾವ್ ಪಣಿಯೂರು, ಕೃಷ್ಣ ಪ್ರಭು, ಹಾಜಿ ರಫೀಕ್ ಅಹ್ಮದ್ ಮಲ್ಲಾರ್, ಕಾಮಿಲ್ ಸಿಕ್ವೇರಾ ಮಣಿಪುರ, ನಾರಾಯಣ ನಾಯಕ್ ಪೆರ್ಣಂಕಿಲ, ಹರಿಣಿ ಸುದರ್ಶನ ರಾವ್ ಕುಂಜಾರುಗಿರಿ, ಪ್ರಭಾಕರ ಶೆಟ್ಟಿ, ರಾಮಚಂದ್ರ ಭಟ್ ಪುಣಚೂರು ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಸಾರ್ವಜನಿಕ ಸಂಪರ್ಕ ಜಿಲ್ಲಾಧ್ಯಕ್ಷ ಮಂಜು ನಾಥ ಉಪಾಧ್ಯ, ಮಂಗಳೂರು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯ ಜಿ.ಹೆಗಡೆ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡಿಸಿದರು. ಸುಧರ್ಮ ಕುಂದರ್ ವಂದಿಸಿದರು. ನಿರ್ಮಲ್ ಕುಮಾರ್ ಕರಂದಾಡಿ ಮತ್ತು ಚಾರ್ಲ್ಸ್ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.

ವಸ್ತು ಪ್ರದರ್ಶನದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು, ಕೃಷಿ ಸಲಕರಣೆ ಗಳು, ವಿವಿಧ ತಳಿಯ ಬೀಜ ಹಾಗೂ ಗಿಡಗಳು ಮತ್ತು ಕೃಷಿ ಸಂಬಂಧ ಪತ್ರಿಕೆ ಗಳು ಪ್ರದರ್ಶನ ಮತ್ತು ಮಾರಾಟಕ್ಕಿದ್ದವು.

1550 ರೂ.ನಲ್ಲಿ ಭತ್ತ ಖರೀದಿಗೆ ಸಿದ್ಧ

ಕರಾವಳಿ ಪ್ರಮುಖ ಬೆಳೆ ಭತ್ತವನ್ನು 1550 ರೂ. ನಲ್ಲಿ ಖರೀದಿ ಸರಕಾರ ಸಿದ್ಧ ಇದೆ. ಭತ್ತದ ಬೆಳೆ ಕುಸಿತ ಆಗಿರುವ ಕುರಿತ ಅಂಕಿ ಅಂಶಗಳ ವರದಿಯನ್ನು ಜಿಲ್ಲಾಧಿಕಾರಿಗಳ ಕಾರ್ಯ ಪಡೆ ಸಲ್ಲಿಸಿದರೆ ನಾವು ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಹೀಗೆ ಈ ಸಾಲಿನಲ್ಲಿ ತೊಗರಿ, ರಾಗಿ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಎಸ್‌ಟಿ ಹಾಗೂ ನೋಟು ರದ್ಧತಿಯಿಂದಾಗಿ ಈ ಬಾರಿ ಅಡಿಕೆ, ತೆಂಗು, ಭತ್ತ ಹೊರತು ಪಡಿಸಿ ಉಳಿದ ಬೆಳೆಗಳಿಗೆ ಧಾರಣೆ ಬಹಳಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News