ಬಿಷಪ್ ರಿಂದ ಭೂಮಿ ಒತ್ತುವರಿ: ಆರೋಪ
Update: 2018-01-28 20:14 IST
ಮಂಗಳೂರು, ಜ. 28: ನಗರದ ಅತ್ತಾವರ ಮತ್ತು ಜೆಪ್ಪಿನಮೊಗರು ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಮಂಗಳೂರು ಬಿಷಪ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉಪಲೋಕಾಯುಕ್ತ ಸುಭಾಷ್ ಬಿ. ಆಡಿ ಸೂಚಿಸಿದ್ದಾರೆ.
ರವಿವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಸಂದರ್ಭದಲ್ಲಿ ನೂರಕ್ಕೂ ಅಧಿಕ ಮಂದಿ ಹಾಜರಾಗಿ, ನಗರದ ಅತ್ತಾವರ ಹಾಗೂ ಜೆಪ್ಪಿನಮೊಗರು ಗ್ರಾಮದಲ್ಲಿರುವ ಸರಕಾರಿ ಪರಂಭೋಕು ಜಮೀನಿನಲ್ಲಿ ವಾಸವಿರುವವರನ್ನು ಒಕ್ಕಲೆಬ್ಬಿಸಿ, ಭೂಮಿಯನ್ನು ಒತ್ತುವರಿ ಮಾಡಲು ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಪ್ರಯತ್ನಿಸುತ್ತಿದ್ದಾರೆ ಎಂದು ದಾಖಲೆಗಳ ಸಮೇತ ಉಪಲೋಕಾಯುಕ್ತರ ಮುಂದೆ ವಾದಿಸಿದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತರು, ಈ ಬಗ್ಗೆ ತನಿಖೆ ನಡೆಸಿ 20 ದಿನಗಳೊಳಗೆ ಪ್ರಾಥಮಿಕ ವರದಿ ನೀಡಲು ಮಂಗಳೂರು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ರಿಗೆ ಆದೇಶಿಸಿದರು.