×
Ad

ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪ್ಲಾಸ್ಟಿಕ್ ನಿಷೇಧ ಅಸಾಧ್ಯವಾಗಿದೆ: ಸ್ವಾಮಿ ಏಕಗಮ್ಯಾನಂದಜಿ ಮಹಾರಾಜ್

Update: 2018-01-28 20:24 IST

ಉಳ್ಳಾಲ, ಜ. 28: ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪ್ಲಾಸ್ಟಿಕ್ ನಿಷೇಧ ಅಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಜನರೇ ಜಾಗೃತರಾಗಿ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಶ್ರೀ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಸಂಯೋಜಕ ರಾದ ಸ್ವಾಮಿ ಏಕಗಮ್ಯಾನಂದಜಿ ಮಹಾರಾಜ್ ಹೇಳಿದರು.

ಅವರು ಉಳ್ಳಾಲ ಮೊಗವೀರಪಟ್ನದ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್‌ ಸ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್‌ ಯುವಕ ಮಂಡಲ, ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು, ನಗರಸಭೆ ಉಳ್ಳಾಲ, ಉಳ್ಳಾಲ ವಲಯದ ವಿವಿಧ ಮಹಿಳಾ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಉಳ್ಳಾಲ ವಲಯದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ರವಿವಾರ ಸ್ವಚ್ಛ ಭಾರತದ ಸಂಕಲ್ಪದೊಂದಿಗೆ ಉಳ್ಳಾಲ ದಲ್ಲಿ ಫೆ.9,10,11 ರಂದು ನಡೆಯಲಿರುವ ಬೀಚ್ ಉತ್ಸವ ನಡೆಯುವ ಸ್ಥಳದಲ್ಲಿ ‘ಉಳ್ಳಾಲ ಕಡಲ ಕಿನಾರೆ ಸ್ವಚ್ಛತಾ ಕಾರ್ಯಕ್ರಮ’ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಪ್ರಧಾನಿ ಕರೆ ಕೊಟ್ಟಾಗ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಕೆಲವೇ ಸಂಘಟನೆಗಳು ನಿರಂತರವಾಗಿ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಅದರಲ್ಲಿ ಉಳ್ಳಾಲದ ಮೊಗವೀರ ಸಂಘವೂ ಒಂದಾಗಿರುವುದು ಶ್ಲಾಘನೀಯ. ಪ್ಲಾಸ್ಟಿಕ್ ಹಾವಳಿ ಮಾರಕ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಮರುಬಳಕೆ ಮಾಡುವುದು, ಪ್ಲಾಸ್ಟಿಕ್‌ಗಳಲ್ಲಿ ತ್ಯಾಜ್ಯ ಹಾಕಿ ಬಿಸಾಡುವುದನ್ನು ನಿಲ್ಲಿಸಬೇಕಿದೆ. ಕಸ ಉತ್ಪಾದಿಸುವುನ್ನು ಕಡಿಮೆಗೊಳಿಸಬೇಕಿದೆ. ಪ್ಲಾಸ್ಟಿಕ್ ನಿಷೇಧ ಸರಕಾರ ಮನಸ್ಸು ಮಾಡಿದಲ್ಲಿ ದೊಡ್ಡ ವಿಚಾರವಿಲ್ಲ, ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಅಸಾಧ್ಯವಾಗಿದೆ. ಪೈಪ್ ಕಂಪೋಸ್ಟ್, ಪಾಟ್ ಕಂಪೋಸ್ಟ್ ಗಳ ಮೂಲಕವೂ ಕಸದಿಂದ ಆದಾಯವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಮನೆಗಳಲ್ಲಿ ಕಸ ಸಂಗ್ರಹಿಸಿದಲ್ಲಿ ಅವರಿಗೆ ವಾರ್ಷಿಕವಾಗಿ ರೂ. 3,000 ವೇತನ ನೀಡಿ ಸಂಗ್ರಹಿಸುವ ಯೋಜನೆಗೆ ರಾಮಕೃಷ್ಣ ಮಿಷನ್ ಮುಂದಾಗಿದೆ ಎಂದ ಸ್ವಾಮೀಜಿ, ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಾಗ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಚಂದನ್ ಗುರಿಕಾರರು, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿ ಮೋನು, ನಗರಸಭೆ ಪೌರಾಯುಕ್ತೆ ವಾಣಿ ವಿ.ಆಳ್ವ, ನಗರಸಭೆ ಸದಸ್ಯೆ ಮೀನಾಕ್ಷಿ ದಾಮೋದರ್ ಉಳ್ಳಾಲ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಜಾನಕಿ ಪುತ್ರನ್, ಉಳ್ಳಾಲ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಭಾರತಿ ಸದಾನಂದ ಬಂಗೇರ, ಮೊಗವೀರ ಹಿ.ಪ್ರಾ,.ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ವೇದಾವತಿ, ಉಳ್ಳಾಲ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ದೇವಾಲಯದ ಅಧ್ಯಕ್ಷ ಯಶವಂತ .ಪಿ.ಅಮೀನ್ ಉಪಸ್ಥಿತರಿದ್ದರು.

ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್ ಪ್ರಸ್ತಾವನೆಗೈದರು. ಗುರುಪ್ರಸಾದ್ ಪುತ್ರನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಪುತ್ರನ್ ವಂದಿಸಿದರು.

ಸೈಯ್ಯದ್ ಮದನಿ ಅರೆಬಿಕ್ ಕಾಲೇಜು ವಿದ್ಯಾರ್ಥಿಗಳು ಉಳ್ಳಾಲ ಸಮುದ್ರ ತೀರದ ಸ್ವಚ್ಛತಾ ಕಾರ್ಯದಲ್ಲಿ ಸ್ವಾಮೀಜಿ ಜತೆಗೆ ಕೈಜೋಡಿಸಿದರು. ಈ ಮೂಲಕ ಸೌಹಾರ್ದಯುತವಾಗಿ ಸಮುದ್ರ ತೀರದ ಸ್ವಚ್ಛತೆಯಲ್ಲಿ ಎಲ್ಲಾ ಧರ್ಮದವರು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ಏಕತೆಗೆ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News