ಪ್ರವಾದಿ ಮುಹಮ್ಮದ್‌ರ ಬಗ್ಗೆ ಸಿನೆಮಾ ತಯಾರಿಸಲು ಯಾರಿಗಾದರೂ ಧೈರ್ಯವಿದೆಯೇ: ಗಿರಿರಾಜ್ ಸಿಂಗ್
ಬಿಕನೇರ್ (ರಾಜಸ್ಥಾನ), ಜ.28: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರನ್ನು ಟೀಕಿಸುವ ಭರದಲ್ಲಿ, ಯಾರಿಗಾದರೂ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಸಿನೆಮಾ ತಯಾರಿಸಲು ಧೈರ್ಯವಿದೆಯೇ ಎಂದು ಪ್ರಶ್ನಿಸುವ ಮೂಲ ವಿವಾದವನ್ನು ಹುಟ್ಟುಹಾಕಿದ್ದಾರೆ. ರವಿವಾರದಂದು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಕೇಂದ್ರ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಗಿರಿರಾಜ್ ಸಿಂಗ್, ಯಾರಿಗಾದರೂ ಪ್ರವಾದಿ ಮುಹಮ್ಮದ್ ಅವರ ಪಾತ್ರವನ್ನು ನಿಭಾಯಿಸುವ ಧೈರ್ಯವಿದೆಯೇ?, ಪದ್ಮಾವತ್ ಸಿನೆಮಾಕ್ಕೆ ವಿರೋಧ ವ್ಯಕ್ತವಾದ ಸಮಯದಲ್ಲೇ ಸಂಜಯ್ ಲೀಲಾ ಭನ್ಸಾಲಿ ಆ ಸಿನೆಮಾದ ಚಿತ್ರೀಕರಣವನ್ನು ನಿಲ್ಲಿಸಬೇಕಿತ್ತು ಎಂದು ಹೇಳಿದ್ದಾರೆ. ಯಾರಾದರೂ ಮಹಾತ್ಮ ಗಾಂಧಿಯವರ ಬಗ್ಗೆ ಚಿತ್ರ ನಿರ್ಮಿಸಿ ಅದರಲ್ಲಿ ಗಾಂಧೀಜಿ ಕುಣಿಯುವಂತೆ ತೋರಿಸಿದ್ದರೆ ನಾನಂತೂ ಕ್ಷಮಿಸುವುದಿಲ್ಲ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
ಪದ್ಮಾವತ್ ಚಿತ್ರವನ್ನು ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಿವೆ. ಈ ಸಿನೆಮಾದಲ್ಲಿ ರಜಪೂತ ರಾಣಿ ಪದ್ಮಾವತಿಯನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹಲವು ವಿರೋಧಗಳು, ಕಾನೂನು ಹೋರಾಟ ಮತ್ತು ಸೆನ್ಸಾರ್ ಕಟ್‌ಗಳ ನಂತರ ಪದ್ಮಾವತ್ ಕೊನೆಗೂ ಜನವರಿ 25ರಂದು ಬಿಡುಗಡೆಗೊಂಡಿದೆ. ಸರ್ವೋಚ್ಚ ನ್ಯಾಯಾಲಯ ಈ ಸಿನೆಮಾದ ಬಿಡುಗಡೆಗೆ ಹಸಿರು ನಿಶಾನೆ ತೋರಿದರೂ ರಜಪೂತ ಕರ್ಣಿಸೇನೆಯಂತಹ ಸಂಘಟನೆಗಳು ಈಗಲೂ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿವೆ.