ತಂದೆಗೆ ಬಂದ ಪಾರ್ಸಲನ್ನು ತೆರೆದು ನೋಡಿದ ಪುತ್ರ: ನಂತರ ನಡೆದ ಅನಾಹುತಕ್ಕೆ ಬೆಚ್ಚಿಬಿತ್ತು ಕುಟುಂಬ

Update: 2018-01-28 15:17 GMT

ಸಾಗರ(ಮ.ಪ್ರ),ಜ.28: ಮೂರು ದಿನಗಳ ಹಿಂದೆ ಪಾರ್ಸೆಲ್ ಬಾಂಬ್ ಸ್ಫೋಟದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವೈದ್ಯರೋರ್ವರು ಚಿಕಿತ್ಸೆ ಫಲಕಾರಿ ಯಾಗದೆ ರವಿವಾರ ಭೋಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ, ಅವರ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬವೀಗ ಶೋಕದಲ್ಲಿ ಮುಳುಗಿದೆ. ಈ ಪಾರ್ಸೆಲ್ ಬಾಂಬ್‌ನ್ನು ಮೃತರ ತಂದೆ, ಇಲ್ಲಿಯ ಮುಖ್ಯ ಅಂಚೆ ಕಚೇರಿಯಲ್ಲಿ ಪ್ರಧಾನ ಅಧೀಕ್ಷಕರಾಗಿರುವ ಕೆ.ಕೆ.ದೀಕ್ಷಿತ್ ಅವರನ್ನು ಗುರಿಯಾಗಿಸಿಕೊಂಡು ರವಾನಿಸಲಾಗಿತ್ತು.

ಡಾ.ರಿತೇಶ್ ದೀಕ್ಷಿತ್(30) ವಿವಾಹ ನಿಶ್ಚಿತಾರ್ಥ ರವಿವಾರ ನಡೆಯಬೇಕಿತ್ತು. ಗುರುವಾರ ತಂದೆಯ ಹೆಸರಿಗೆ ಬಂದಿದ್ದ ಪಾರ್ಸೆಲ್‌ವೊಂದನ್ನು ರಿತೇಶ್ ಬಿಚ್ಚಿದಾಗ ಅದರಲ್ಲಿದ್ದ ಎಫ್‌ಎಂ ರೇಡಿಯೊದಲ್ಲಿ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡಿತ್ತು. ಇದು ಮಧ್ಯಪ್ರದೇಶದಲ್ಲಿ ಇಂತಹ ಮೊದಲ ಪ್ರಕರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ ನಿವಾಸಿಯಾಗಿರುವ ಆರೋಪಿ ಹೇಮಂತ ಅಲಿಯಾಸ್ ಆಶಿಷ್ ಸಾಹು(25) ಕೆಲವು ವರ್ಷಗಳ ಹಿಂದೆ ಅಂಚೆ ಇಲಾಖೆಯಲ್ಲಿ ಹಂಗಾಮಿ ನೌಕರನಾಗಿದ್ದ. ಈ ವೇಳೆ 38 ಲಕ್ಷ ರೂ.ಗಳ ವಂಚನೆಗಾಗಿ ಆತ ಮತ್ತು ಇತರ ಕೆಲವರ ವಿರುದ್ಧ ವಿಚಾರಣೆ ನಡೆಸಿದ್ದ ದೀಕ್ಷಿತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

 ದೀಕ್ಷಿತ್ ವಿರುದ್ಧ ಪ್ರತೀಕಾರಕ್ಕೆ ನಿರ್ಧರಿಸಿದ್ದ ಹೇಮಂತ್ ಗೂಗಲ್‌ನಲ್ಲಿ ಮಾಹಿತಿಗಳನ್ನು ಪಡೆದುಕೊಂಡು ಪಾರ್ಸೆಲ್ ಬಾಂಬ್ ತಯಾರಿಸಿದ್ದ ಮತ್ತು ಅದನ್ನು ಎಫ್‌ಎಂ ರೇಡಿಯೊದಲ್ಲಿ ಅಳವಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News