ಆರ್‌ಟಿಐ ಕಾಯ್ದೆಯಡಿ ಮಾಹಿತಿ ಸಂಗ್ರಹ ಸರಕಾರಿ ಪ್ರಾಧಿಕಾರಕ್ಕೆ ಕಡ್ಡಾಯವಲ್ಲ:ಹೈಕೋರ್ಟ್

Update: 2018-01-28 15:53 GMT

ಹೊಸದಿಲ್ಲಿ,ಜ.28: ಕೆಲವು ಮಾಹಿತಿಗಳನ್ನು ಪಡೆದುಕೊಳ್ಳಲು ಸರಕಾರಿ ಪ್ರಾಧಿಕಾರಗಳಿಗೆ ಅಧಿಕಾರವಿದೆಯಾದರೂ, ಆರ್‌ಟಿಐ ಕಾಯ್ದೆಯಡಿ ಅರ್ಜಿದಾರನಿಗೆ ಮಾಹಿತಿಗಳನ್ನು ಒದಗಿಸಲು ಅದು ಈ ಅಧಿಕಾರವನ್ನು ಬಳಸುವುದು ಕಡ್ಡಾಯವಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ಯಾವುದೇ ಸರಕಾರಿ ಪ್ರಾಧಿಕಾರವು ತಾನು ಹೊಂದಿರುವ ಮಾಹಿತಿಗಳನ್ನಷ್ಟೇ ಆರ್‌ಟಿಐ ಅರ್ಜಿದಾರನಿಗೆ ಒದಗಿಸಬಹುದಾಗಿದೆ. ತನ್ನಲ್ಲಿಲ್ಲದ ಮಾಹಿತಿಯನ್ನು ಬೇರೆ ಕಡೆಗಳಿಂದ ಪಡೆದುಕೊಳ್ಳುವ ಅಧಿಕಾರ ಅದಕ್ಕಿದೆಯಾದರೂ ಕಡ್ಡಾಯವಾಗಿ ಅಂತಹ ಮಾಹಿತಿಯನ್ನು ಪಡೆದುಕೊಂಡು ತನಗೆ ನೀಡುವಂತೆ ಅರ್ಜಿದಾರನು ಕೇಳುವಂತಿಲ್ಲ ಎಂದು ನ್ಯಾ.ವಿಭು ಬಖ್ರು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತನ್ನ ನೌಕರರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದಂತೆ ಖಾಸಗಿ ಅನುದಾನರಹಿತ ಶಾಲೆಯೊಂದರಿಂದ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡಲು ನಿರಾಕರಿಸಿದ್ದ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಆದೇಶವನ್ನು ಅದೇ ಶಾಲೆಯ ಉದ್ಯೋಗಿಯಾಗಿರುವ ಆರ್‌ಟಿಐ ಅರ್ಜಿದಾರ ಪ್ರಶ್ನಿಸಿದ್ದರು.

ದಿಲ್ಲಿ ಶಾಲಾ ಶಿಕ್ಷಣ ನಿಯಮಗಳು,1973ರಡಿ ಶಾಲೆಯು ಸಲ್ಲಿಸಿರುವ ತನ್ನ ವ್ಯವಹಾರಗಳ ಆಡಿಟ್ ವರದಿಯನ್ನು ತನಗೆ ಒದಗಿಸುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರ ಮಾಡಿಕೊಂಡಿದ್ದ ಕೋರಿಕೆಯನ್ನು ಸಿಐಸಿ ನಿರಾಕರಿಸಿತ್ತು.

ಸಿಐಸಿಯ ಆದೇಶವನ್ನು ಎತ್ತಿಹಿಡಿದ ನ್ಯಾಯಲಯವು ಖಾಸಗಿ ಅನುದಾನರಹಿತ ಶಾಲೆಗಳು ದಿಲ್ಲಿ ಸರಕಾರದ ಪರಿಶೀಲನೆಗೆ ಮುಕ್ತವಾಗಿವೆ, ಆದರೆ ಸಾರ್ವಜನಿಕರಿಗಲ್ಲ ಎಂದು ಸ್ಪಷ್ಟಪಡಿಸಿತು.

ಆದರೆ ಖಾಸಗಿ ಶಾಲೆಯ ವ್ಯವಹಾರಕ್ಕೆ ಸಂಬಂಧಿಸಿದ ಆಡಿಟ್ ವರದಿಯನ್ನು ಹೊರತುಪಡಿಸಿ ಇತರ ಯಾವುದೇ ಮಾಹಿತಿ ದಿಲ್ಲಿ ಸರಕಾರದ ಬಳಿಯಿದ್ದರೆ ಆರ್‌ಟಿಐ ಅರ್ಜಿದಾರನು ಅದಕ್ಕಾಗಿ ಕೋರಿಕೊಳ್ಳಬಹುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News