ನೈಟ್ ಕ್ಲಬ್ ನಲ್ಲಿ ಶೂಟೌಟ್: ಕನಿಷ್ಠ 14 ಮಂದಿ ಬಲಿ
Update: 2018-01-28 22:08 IST
ರಿಯೊ ಡಿ ಜನೈರೊ,ಜ.28: ಬ್ರೆಝಿಲ್‌ನಲ್ಲಿ ಶನಿವಾರ ನೈಟ್ ಕ್ಲಬ್ ಒಂದರಲ್ಲಿ ನಡೆದ ಶೂಟ್‌ಔಟ್ ಒಂದರಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸೆಯಿರಾ ರಾಜ್ಯದ ಫೊರ್ಟಾಝೆಲ್ಲಾ ನಗರದಲ್ಲಿ ‘ ಫೊರೊ ಡೊ ಗಾಗೊ’ ಹೆಸರಿನ ನೈಟ್‌ಕ್ಲಬ್‌ಗೆ ಬಂದೂಕುಧಾರಿಗಳ ಗುಂಪೊಂದು ನುಗ್ಗಿ, ಮನಬಂದಂತೆ ಗುಂಡುಹಾರಿಸಿತೆಂದು ಅಧಿಕೃತ ಮೂಲಗಳು ತಿಳಿಸಿದೆ. ಘಟನೆಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆಂದು ಅವು ಹೇಳಿವೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.
ಇದೊಂದು ಪೂರ್ವಯೋಜಿತ ದಾಳಿಯೆಂದು ಪೊಲೀಸರು ತಿಳಿಸಿದ್ದು, ಹತ್ಯಾಕಾಂಡದ ಬಳಿಕ ಪರಾರಿಯಾಗಿರುವ ಪಾತಕಿಗಳಿಗಾಗಿ ಪೊಲೀಸರು ಹೆಲಿಕಾಪ್ಟರ್‌ಗಳನ್ನು ಬಳಸಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಎರಡು ಡ್ರಗ್ ಮಾಫಿಯಾ ಗ್ಯಾಂಗ್‌ಗಳ ನಡುವೆ ನಡೆಯುತ್ತಿರುವ ಘರ್ಷಣೆಯ ಹಿನ್ನೆಲೆಯಲ್ಲಿ, ಈ ಹತ್ಯಾಕಾಂಡ ನಡೆದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.