ಭಾರತದಲ್ಲಿ ಬಾಲಕಿಯರ ಶಿಕ್ಷಣಕ್ಕೆ ನೆರವಾಗಲು ಬಯಸುತ್ತೇನೆ: ಮಲಾಲ

Update: 2018-01-28 17:29 GMT

ಡಾವೋಸ್,ಜ.28: ಭಾರತದಲ್ಲಿ ತನಗೆ ವ್ಯಕ್ತವಾಗುತ್ತಿರುವ ಬೆಂಬಲ ಹಾಗೂ ಅಭಿಮಾನಗಳಿಂದ ಉತ್ತೇಜಿತಳಾಗಿರುವ ತಾನು ಆ ದೇಶಕ್ಕೆ ಭೇಟಿ ನೀಡಲು ಬಯಸುತ್ತಿದ್ದು, ಅಲ್ಲಿನ ಅವಕಾಶವಂಚಿತ ಬಾಲಕಿಯರ ಹಿತರಕ್ಷಣೆಗಾಗಿ ಕೆಲಸ ಮಾಡಲು ಉತ್ಸುಕಳಾಗಿರುವುದಾಗಿ ನೊಬೆಲ್ ಪುರಸ್ಕೃತೆ ಹಾಗೂ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸುಫ್‌ಝಾಯ್ ಹೇಳಿದ್ದಾರೆ.

 ಜನವರಿ 22ರಿಂದ 26ರವರೆಗೆ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಡಾವೋಸ್‌ಗೆ ಆಗಮಿಸಿದ್ದ ಅವರು ಭಾರತಕ್ಕೆ ಭೇಟಿ ನೀಡುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

   ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅರ್ಥಿಕ ನಿಧಿಸಂಗ್ರಹಣೆಗಾಗಿ ತಾನು ಸಹಸಂಸ್ಥಾಪಕಿಯಾಗಿರುವ ‘ಮಲಾಲಾ ಫಂಡ್’ನ ಉಪಕ್ರಮಗಳಲ್ಲೊಂದಾದ ಗುಲ್ಮಾಖಾಯ್ ನೆಟ್‌ವರ್ಕ್ ಅನ್ನು ಭಾರತದಲ್ಲೂ ವಿಸ್ತರಿಸಲು ಬಯಸುತ್ತಿರುವುದಾಗಿ ಮಲಾಲಾ ಹೇಳಿದ್ದಾರೆ. ಮಲಾಲಾ ಅವರು ತಾಲಿಬಾನ್‌ನ ವಿರುದ್ಧ ಗುಲ್ಮಾಖಾಯ್ ಎಂಬ ಕಾವ್ಯನಾಮದಲ್ಲಿ ಲೇಖನಗಳನ್ನು ಹಾಗೂ ಕವನಗಳನ್ನು ಬರೆದಿದ್ದರು.

ಭಾರತದಲ್ಲಿ ತನಗೆ ದೊರೆತಿರುವ ಬೆಂಬಲವು ಅಭೂತಪೂರ್ವವಾದುದು ಹಾಗೂ ತನಗೆ ದೊರೆತಿರುವ ಪ್ರೀತಿ ಹಾಗೂ ಬೆಂಬಲಕ್ಕಾಗಿ ಭಾರತದಲ್ಲಿನ ಪ್ರತಿಯೊಬ್ಬರಿಗೂ ಕೃತಜ್ಞತೆಯರ್ಪಿಸುತ್ತೇನೆ. ನನಗೆ ಬೆಂಬಲ ವ್ಯಕ್ತಪಡಿಸಿ ಭಾರತದಿಂದ ಹಲವಾರು ಪತ್ರಗಳು ಬಂದಿವೆಯೆಂದು ಎಂದು ಆಕೆ ಹೇಳಿದ್ದಾರೆ.

ತಾನು ಭಾರತದ ಪ್ರಧಾನಿಯಾಗಬೇಕೆಂಬ ಬಾಲಕಿಯೊಬ್ಬಳು ತನಗೆ ಬರೆದ ಪತ್ರವನ್ನು ಪ್ರಸ್ತಾಪಿಸಿದ ಮಲಾಲ, ‘‘ ಒಂದು ದಿನ ನಾವಿಬ್ಬರೂ ಪ್ರಧಾನಿಗಳಾಗಲಿದ್ದೇವೆ ಹಾಗೂ ಉಭಯದೇಶಗಳ ನಡುವೆ ಶಾಂತಿ ಸ್ಥಾಪನೆಯ ಬಗ್ಗೆ ಮಾತುಕತೆಗಳನ್ನು ನಡೆಸಲಿದ್ದೇವೆ ಎಂದು ತಾನು ಬರೆದಿದ್ದಾಗಿ ಸ್ಮರಿಸಿಕೊಂಡರು.

ಈ ಪತ್ರವು ನನ್ನ ಹೃದಯವನ್ನು ತಟ್ಟಿದೆ. ಮುಂದಿನ ತಲೆಮಾರು ಅದರಲ್ಲೂ ಬಾಲಕಿಯರು ಶಿಕ್ಷಣದ ಬಗ್ಗೆ ಮಾತ್ರವೇ ಅಲ್ಲ, ತಾವು ನಾಯಕರಾಗಬೇಕೆಂದೂ ಬಯಸುತ್ತಿದ್ದಾರೆ. ಅವರು ಪ್ರಧಾನಿಯಾಗಲು, ಅಧ್ಯಕ್ಷರಾಗಲು ಬಯಸುತ್ತಿದ್ದಾರೆ. ಇದು ನನಗೆ ಭವಿಷ್ಯದ ಬಗ್ಗೆ ಭರವಸೆಯನ್ನು ಮೂಡಿಸಿದೆ’’ಯೆಂದು ಮಲಾಲ ಹೇಳಿದ್ದಾರೆ.

ಹಿಂದಿ ಭಾಷೆಯನ್ನು ತಾನು ಟಿವಿ ವಾಹಿನಿಗಳನ್ನು ವೀಕ್ಷಿಸಿ ಕಲಿತುಕೊಂಡಿರುವುದಾಗಿ ಹೇಳಿದ ಮಲಾಲ, ಭಾರತ ಹಾಗೂ ಪಾಕಿಸ್ತಾನಗಳೆರಡೂ ಹಲವಾರು ರೀತಿಗಳಲ್ಲಿ ಪರಸ್ಪರ ನಂಟು ಹೊಂದಿವೆ. ಉಭಯ ದೇಶಗಳ ಸಂಸ್ಕೃತಿ ಹಾಗೂ ವೌಲ್ಯಗಳಿಂದ ಈ ಜಗತ್ತು ಕಲಿತುಕೊಳ್ಳಬೇಕಾಗಿರುವುದು ಬಹಳಷ್ಟಿದೆಯೆಂದು ಮಲಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News