×
Ad

ಉಕ್ಕಿ ಹರಿಯುತ್ತಿರುವ ಸೈನ್ ನದಿ: ಪ್ಯಾರಿಸ್‌ಗೆ ಪ್ರವಾಹ ಭೀತಿ

Update: 2018-01-28 22:25 IST

ಪ್ಯಾರಿಸ್,ಜ.28: ಕಳೆದ ಮೂರು ದಿನಗಳಿಂದ ಸೈನ್ ನದಿಯು ಉಕ್ಕಿ ಹರಿಯುತ್ತಿದ್ದು, ರವಿವಾರ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಪ್ಯಾರಿಸ್ ಪ್ರಾಂತದ ತಗ್ಗುಪ್ರದೇಶಗಳಲ್ಲಿ ವಾಸವಾಗಿರುವ 1,500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರ ಹಾಗೂ ಅದರ ಹೊರವಲಯದ ಪ್ರದೇಶಗಳಲ್ಲಿರುವ 1,500 ಮಂದಿಯನ್ನು ತೆರವುಗೊಳಿಸಲಾಗಿದೆಯೆಂದು ಪ್ಯಾರಿಸ್ ಪೊಲೀಸ್ ಇಲಾಖೆಯ ವರಿಷ್ಠ ಮೈಕೆಲ್ ಡೆಲ್‌ಪುಯೆಚ್ ತಿಳಿಸಿದ್ದಾರೆ.

ರವಿವಾರ ಹಾಗೂ ಸೋಮವಾರ ಬೆಳಗ್ಗಿನ ಹೊತ್ತಿಗೆ ಸೈನ್ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುವ ನಿರೀಕ್ಷೆಯಿದ್ದು, 2016ರಲ್ಲಿ ಸಂಭವಿಸಿದ ಪ್ರವಾಹದ ಪರಿಸ್ಥಿತಿ ಮರುಕಳಿಸುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸೈನ್ ನದಿಯಲ್ಲಿ ಎಲ್ಲಾ ರೀತಿಯ ದೋಣಿ ಸಂಚಾರವನ್ನು ನಿಷೇಧಿಸಲಾಗಿದೆ. ಪ್ಯಾರಿಸ್ ನಗರದಲ್ಲಿ ನದಿ ಪಕ್ಕದಲ್ಲಿರುವ ರಸ್ತೆಗಳು ಹಾಗೂ ವಿಶ್ವವಿಖ್ಯಾತ ಲೊವ್ರೆ ಮ್ಯೂಸಿಯಂ ಸಮೀಪದ ಪ್ರದೇಶ ಕೂಡಾ ಜಲಾವೃತಗೊಂಡಿರುವುದಾಗಿ ಅವರು ಹೇಳಿದ್ದಾರೆ. 1910ರಲ್ಲಿ ಪ್ಯಾರಿಸ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸೈನ್ ನದಿ ನೀರಿನ ಮಟ್ಟವು 8.65 ಮೀಟರ್ ವರೆಗೆ ಏರಿದ ಪರಿಣಾಮವಾಗಿ ನಗರಕ್ಕೆ ಭಾರೀ ಹಾನಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News