ಕಲಾವಿದರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಲಿ: ದೆಹಲಿ ಕರ್ನಾಟಕ ಸಂಘದಲ್ಲಿ ಸೂರಿಕುಮೇರಿ ಗೋವಿಂದ ಭಟ್‌

Update: 2018-01-28 17:17 GMT

ಹೊಸದಿಲ್ಲಿ, ಜ. 28: ಯಕ್ಷಗಾನ ಕಲಾವಿದರು ಪ್ರತಿಭೆಯೊಂದಿಗೆ ತ್ಯಾಗಶೀಲವನ್ನು ಗುಣವನ್ನು ಹೊಂದಿದ್ದಾರೆ ಎಂದು ಈ ಬಾರಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪಡೆದ ಯಕ್ಷಗಾನದ ಮೇರು ಕಲಾವಿದ ಕೆ. ಗೋವಿಂದ ಭಟ್ ಹೇಳಿದರು.

ರಾಷ್ಟ್ರಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ದೆಹಲಿ ಕರ್ನಾಟಕ ಸಂಘ ಜ. 21ರಂದು ಆಯೋಜಿಸಿದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ತಿಂಗಳುಗಟ್ಟಲೆ ಮೇಳದೊಂದಿಗೆ ತಿರುಗಾಟ ನಡೆಸುವ ಕಲಾವಿದರು ಕುಟುಂಬದ ಸಂಪರ್ಕವಿಲ್ಲದೆ ದುಡಿಯುತ್ತಾರೆ. ಅವರ ಸಂಕಷ್ಟಗಳಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಅವರು ಆಶಿಸಿದರು. ಕಲಾಸೇವೆಗೆ ಉನ್ನತ ಮನ್ನಣೆ ದೊರಕಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಅಭಿನಂದನಾ ಭಾಷಣ ಮಾಡಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣ ಭಟ್ ಅವರು, ಗೋವಿಂದ ಭಟ್ಟರ ರಂಗದ ಒಳಗಿನ ಹಾಗೂ ರಂಗದ ಹೊರಗಿನ ಬದುಕಿನ ಬಗ್ಗೆ ವಿವರಿಸಿ ಯಕ್ಷಗಾನದ ಒಟ್ಟಂದಕ್ಕಾಗಿ ಕಲಾವಿದರು ಅವರಿಂದ ಕಲಿಯಬೇಕಾದ ಅಂಶಗಳನ್ನು ವಿವರಿಸಿದರು. ಬೇರೆಲ್ಲಾ ಕಲಾ ಪ್ರಕಾರಗಳಿಗೆ ಹೋಲಿಸಿದರೆ ಯಕ್ಷಗಾನ ನಡೆದು ಬಂದ ದಾರಿಯಲ್ಲಿ ಯಕ್ಷಗಾನದ ಕಲಾವಿದರಿಗೆ ಸಲ್ಲಬೇಕಾದ ಮನ್ನಣೆ ದೊರೆಯಲಿಲ್ಲ. ಇಷ್ಟು ವರ್ಷಗಳಲ್ಲಿ ತೆಂಕುತಿಟ್ಟಿನ ಇಬ್ಬರು ಕಲಾವಿದರಿಗೆ ಮತ್ತು ಬಡಗುತಿಟ್ಟಿನ ನಾಲ್ಕಾರು ಕಲಾವಿದರಿಗೆ ಮಾತ್ರ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿ ದೊರೆತಿದೆಯಷ್ಟೆ. ಯಕ್ಷಗಾನ ಕಲಾವಿದರನ್ನು ಜನ ಗುರುತಿಸಿ ಗೌರಸುತ್ತಿದ್ದರೂ ಸರಕಾರದ ಮಟ್ಟದಲ್ಲಿ ಗುರುತಿಸುವ ವಿಷಯದಲ್ಲಿ ಯಕ್ಷಗಾನ ರಂಗಕ್ಕೆ ಅನ್ಯಾಯವಾಗಿದೆ ಎಂದರು.

ಗೋವಿಂದ ಭಟ್ ಅವರು ಯಕ್ಷಗಾನ ರಂಗದ ಪರ್ವತವಿದ್ದಂತೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಬಣ್ಣಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಪೂಜಾ ಪಿ. ರಾವ್ ಕಾರ್ಯಕ್ರಮ ನಿರೂಪಿಸಿದರು, ಜಂಟಿ ಕಾರ್ಯದರ್ಶಿ ಟಿ.ಪಿ. ಬೆಳ್ಳಿಯಪ್ಪ ವಂದಿಸಿದರು. ಬಳಿಕ ‘ಶ್ರೀಹರಿ ದರ್ಶನ’ ಯಕ್ಷಗಾನ ಪ್ರದರ್ಶನ ನಡೆಯಿತು. ಶತ್ರು ಪ್ರಸೂಧನನಾಗಿ ಗೋವಿಂದ ಭಟ್, ಕೃಷ್ಣನಾಗಿ ಉಜಿರೆ ಅಶೋಕ್ ಭಟ್ ಮತ್ತು ಸುದರ್ಶನನಾಗಿ ಭರವಸೆಯ ಕಲಾವಿದೆ ರಂಜಿತಾ ಎಲ್ಲೂರು ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News