ಮಂಗಳೂರು ವಿವಿಯಲ್ಲಿ 'ಕಲಾ ಸಾಕ್ಷರತಾ ಶಿಬಿರ' ಉದ್ಘಾಟನೆ
ಕೊಣಾಜೆ,ಜ.29: ವಿದ್ಯಾರ್ಥಿಗಳು ಕಲಾಪ್ರಜ್ಞೆ, ಕಲಾಸಕ್ತಿಯನ್ನು ಬೆಳೆಸಿಕೊಂಡು ಮುನ್ನಡೆದರೆ ಭವಿಷ್ಯದಲ್ಲಿ ಉತ್ತಮ ನೆಮ್ಮದಿಯುತ ಬದುಕನ್ನು ಕಂಡುಕೊಳ್ಳಲು ಸಾಧ್ಯವಿದೆ. ಕಲೆಯ ಇತಿಹಾಸ, ಕಲಾಕೃತಿ, ಕಲಾಕಾರನ ಜೀವನ ಚರಿತ್ರೆ, ಸಾಧನೆಗಳ ಬಗ್ಗೆ ಅಧ್ಯಯನ ಮಾಡಿದರೆ ಜ್ಞಾನ ಕೌಶಲವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಎನ್.ಜಿ.ಪಾವಂಜೆ ಪೀಠ ಹಾಗೂ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಇದರ ಆಶ್ರಯದಲ್ಲಿ ಸೋಮವಾರ ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆದ ಒಂದು ದಿನದ 'ಕಲಾ ಸಾಕ್ಷರತಾ ಶಿಬಿರವನ್ನು' ಉದ್ಘಾಟಿಸಿ ಮಾತನಾಡಿದರು.
ವಿದೇಶಗಳಲ್ಲಿ ಬಹಳ ವರ್ಷಗಳ ಹಿಂದೆಯೆ ಚಿತ್ರಕಲೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಅಲ್ಲಿಯ ಜನರು ಬೆಳೆಸಿಕೊಂಡು ಅದನ್ನು ಅನುಭವಿಸಿದ್ದರು. ನಮ್ಮಲ್ಲಿಯೂ ಕೂಡಾ ಕಲೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದ್ದು, ಕಲಾ ಮನೋಪ್ರಜ್ಞೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಹಾಗೂ ಕಲಾವಿದನಿಗೂ ಕೂಡಾ ಸಮಾಜದಲ್ಲಿ ಉತ್ತಮ ಮನ್ನಣೆ ಸಿಗಬೇಕಿದೆ ಎಂದು ಹೇಳಿದೆ.
ಮಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್ ಅವರು ಮಾತನಾಡಿ, ಕಲೆಯು ಪ್ರತಿಯೊಬ್ಬರಲ್ಲೂ ಜೀವನೋತ್ಸಾಹವನ್ನು ಬೆಳೆಸಿ ಸ್ಪೂರ್ತಿ ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಲೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಇಂತಹ ಶಿಬಿರಗಳಲ್ಲಿ ಯುವ ಸಮುದಾಯ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಲಾ ಸಾಕ್ಷರತಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲಾವಿದರಾದ ಪಿ.ಎಸ್.ಪುಣಿಚಿತ್ತಾಯ, ಗಣೇಶ ಸೋಮಯಾಜಿ, ಅನಂತ ಪದ್ಮನಾಭ, ಶರತ್ ಹೊಳ್ಳ ಅವರು ಭಾಗವಹಿಸಿದ್ದರು.
ಮಂಗಳೂರು ವಿವಿ ಎನ್.ಜಿ.ಪಾವಂಜೆ ಪೀಠದ ಸಂಯೋಜಕರಾದ ಡಾ.ರವಿಶಂಕರ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ರವಿಶಂಕರ್, ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಮ್.ಖಾನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ 72 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿತ್ರಕಲೆಯ ಮೂಲಭೂತ ಅಂಶಗಳು, ಪರಿಸರ ಚಿತ್ರಗಳು, ಲೈವ್ ಡೆಮೋ, ಕ್ವಿಕ್ ಪೈಂಟಿಂಗ್ ಮೊದಲಾದ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.