ಅಯೋಧ್ಯೆಯ ಸುತ್ತಮುತ್ತಲೂ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ :ವಿಹಿಂಪ ನಾಯಕ ಮಿಲಿಂದ್ ಪರಾಂಡೆ
ಪುತ್ತೂರು,ಜ.29 : ರಾಮನ ಜನ್ಮಭೂಮಿಯಲ್ಲಿ ರಾಮಮಂದಿರವೇ ಆಗಬೇಕು ಎಂದು ಹಿಂದೂ ಸಮಾಜ ಸಂಕಲ್ಪ ಮಾಡಿದ್ದು, ರಾಮನ ಜನ್ಮಭೂಮಿಯಲ್ಲಿ ಮಾತ್ರವಲ್ಲ ಆಯೋಧ್ಯೆಯ ಸುತ್ತಮುತ್ತಲೂ ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಬಾಬರನ ಹೆಸರಿನಲ್ಲಿ ದೇಶದ ಯಾವುದೇ ಮೂಲೆಯಲ್ಲಿಯೂ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಜೊತೆ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ಅವರು ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಸಂಕಲ್ಪದಲ್ಲಿ ರವಿವಾರ ಪುತ್ತೂರು ತಾಲೂಕಿನ ಕಾವು ಜಂಕ್ಷನ್ ಬಳಿಯಿಂದ ಈಶ್ವರಮಂಗಲದ ಹನುಮಗಿರಿಗೆ ನಡೆದ 'ರಾಮನೆಡೆಗೆ ಹನುಮನಡಿಗೆ' ಪಾದಯಾತ್ರೆಯ ಅಂಗವಾಗಿ ಈಶ್ವರಮಂಗಲ ಗಜಾನನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮನ ಜನ್ಮಭೂಮಿಯ ಬಳಿ ಮಸೀದಿಯೂ ನಿರ್ಮಾಣ ಆಗಬೇಕೆಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಆದರೆ ರಾಮನ ಜನ್ಮಭೂಮಿಯಲ್ಲಿ ರಾಮ ಮಂದಿರವೇ ಆಗಬೇಕೆಂದು ಹಿಂದೂ ಸಮಾಜ ಸಂಕಲ್ಪ ಮಾಡಿದ್ದು, ಸಂತರ ಹಾಗೂ ಆಂದೋಲನದಲ್ಲಿ ಭಾಗಿಯಾಗಿದ್ದವರ ನೇತೃತ್ವದಲ್ಲಿಯೇ ರಾಮಮಮದಿರ ನಿರ್ಮಾಣ ಆಗಲಿದೆ. ಹೊಸ ತರುಣರು ಸಂಕಲ್ಪದಲ್ಲಿ ಭಾಗಿಯಾಗುತ್ತಿದ್ದು, ಸ್ವಾಭಿಮಾನದ ಆಂದೋಲನ ಅರಂಭವಾಗಿದೆ. ಇದು ಕೇವಲ ಮಂದಿರ ನಿರ್ಮಾಣದ ಆಂದೋಲನವಲ್ಲ ಹಿಂದೂ ಸಮಾಜವನ್ನು ಉಳಿಸುವ ಆಂದೋಲನವಾಗಿದೆ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಅವರು ಮಾತನಾಡಿ, ನಮಗೆ ರಾವಣ ರಾಜ್ಯ ಬೇಡ. ರಾಮ ರಾಜ್ಯಬೇಕು. ಅದಕ್ಕಾಗಿ ದೇಶದಲ್ಲಿ ಪರಿವರ್ತನೆ ತರಲು ವಿಶ್ವಹಿಂದು ಪರಿಷತ್ ಸಂಕಲ್ಪ ಮಾಡಿದೆ. ರಾಮರಾಜ್ಯದಲ್ಲಿ ಪ್ರತಿಯೊಬ್ಬರ ಜೀವಕ್ಕೂ ಬೆಲೆಯಿದೆ. ಆದರೆ ಕರ್ನಾಟಕದಲ್ಲಿ ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತಿ ಒಡೆದು ಆಳುವ ಸರ್ಕಾರ ರಾಜ್ಯವನ್ನು ವಿನಾಶದ ಅಂಚಿಗೆ ತಂದಿದೆ. ಸಂಪತ್ತು ಕೆಲವೇ ಮಂದಿಗಳ ಕೈಸೇರುತ್ತಿದೆ ಎಂದು ಆರೋಪಿಸಿದರು.
ಹಿಂದೂ ಧರ್ಮದ ಪೂಜನೀಯವಾದ ಗೋವಿಗೆ ರಕ್ಷಣೆಯಿಲ್ಲ, ಅಲ್ಪಸಂಖ್ಯಾತರ ಓಲೈಕೆ, ಲವ್ ಜಿಹಾದ್ ಮೂಲಕ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ 50ಮಂದಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಸಿ 25 ಮಂದಿ ಮುಗ್ದರನ್ನು ಬಲಿ ತೆಗೆದುಕೊಂಡಿರುವುದು ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂಬುವುದಕ್ಕೆ ಉದಾಹರಣೆಯಾಗಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೇ ನಮ್ಮ ಉದ್ದೇಶವಲ್ಲ. ಜೊತೆಗೆ ಹಿಂದೂ ಧರ್ಮದ ರಕ್ಷಣೆ, ಗೋಸಂಪತ್ತುಗಳ ಸಮೃದ್ಧಿ, ಮಹಿಳೆಯರ ರಕ್ಷಣೆ, ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡುವುದು ಇದರ ಹಿಂದಿನ ಉದ್ದೇಶ ಎಂದರು. ಭಜರಂಗದಳ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ದಕ್ಷಿಣ ಪ್ರಾಂತಕಾರ್ಯದರ್ಶಿ ಜಗನ್ನಾಥ್, ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಪಿ.ಎಸ್, ಪುತ್ತೂರು ನಗರಾಧ್ಯಕ್ಷ ಜನಾರ್ದನ ಬೆಟ್ಟ, ಭಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತ ಮೂಡೆತ್ತಾಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 1992ರಲ್ಲಿ ಆಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದ ರಾಜೇಶ್ ಬನ್ನೂರು, ಚಂದ್ರಶೇಖರ ರಾವ್ ಬಪ್ಪಳಿಗೆ, ಜ್ಞಾನೇಶ್ ಕುಮಾರ್, ಭಾಸ್ಕರ ಧರ್ಮಸ್ಥಳ, ರಾಮಚಂದ್ರ ನಾಯ್ಕ್ ಸುಳ್ಯ, ಆನಂದ ನೆಕ್ಕರೆ, ರಾಮಕೃಷ್ಣ ಆಳ್ವ ಬೆಟ್ಟಂಪಾಡಿ, ನಾರಾಯಣ ಪೂಜಾರಿ ಬೆಳ್ಳಿಪ್ಪಾಡಿ, ಲೋಕಪ್ಪ ಕಳಮೆಮಜಲು, ಸುಂದರ ಆಚಾರ್ಯ ಈಶ್ವರಮಂಗಲ, ಶಿವಪ್ಪ ಈಶ್ವರಮಂಗಲ, ನಾರಾಯಣ ಆಚಾರ್ಯ ಕಾವು, ಅಣ್ಣಿ ಪೂಜಾರಿ ಕಾವು, ಕೊರಗಪ್ಪ ಮುರುಳ್ಯ, ಸಂಕಪ್ಪ ಗೌಡ ಅಜೇಯನಗರ ಹಾಗೂ ನಿರ್ಮಲ ಪುತ್ತೂರು ಅವರನ್ನು ಗೌರವಿಸಲಾಯಿತು.
ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಸ್ವಾಗತಿಸಿದರು. ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಕಪ್ಪ ಗೌಡ ಅಜೇಯನಗರ ಕರಸೇವಕರ ಮಾಹಿತಿ ನೀಡಿದರು. ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಗೋವರ್ದನ್ ವಿಟ್ಲ ವಂದಿಸಿದರು. ನವೀನ್ ಕುಲಾಲ್ ನಿರೂಪಿಸಿದರು.