ಕಾಸ್ ಗಂಜ್: ದ್ವೇಷದಿಂದ ಬೇರೆಯಾದವರು ತಮ್ಮವರಿಗಾಗಿ ಒಂದಾದರು
ಕಾಸಗಂಜ್(ಉ.ಪ್ರ),ಜ.29: ಕೋಮುದ್ವೇಷವು ಅವರನ್ನು ವಿಭಜಿಸಿತ್ತು, ಈಗ ಸಮಾನ ದುಃಖವು ಅವರನ್ನು ಒಂದುಗೂಡಿಸಿದೆ. ಇದು ಕಾಸಗಂಜ್‌ನ ಕೋತ್ವಾಲಿ ಪೊಲೀಸ್ ಠಾಣೆಯ ಎದುರು ರವಿವಾರ ಕಂಡು ಬಂದ ಮನಮಿಡಿಯುವ ದೃಶ್ಯ. ಅವರೆಲ್ಲ ಕೋಮು ಘರ್ಷಣೆಗೆ ಸಂಬಂಧಿಸಿ ಬಂಧಿತರಾಗಿರುವವರ ಕುಟುಂಬಗಳ ಸದಸ್ಯರು. ಗಣತಂತ್ರ ದಿನದಂದು ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಯ ಮೇಲೆ ಕಲ್ಲುತೂರಾಟದ ಬಳಿಕ ನಡೆದ ಕೋಮು ಘರ್ಷಣೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಜಿಲ್ಲಾದ್ಯಂತ ಇನ್ನೂ ಉದ್ವಿಗ್ನತೆ ಹೊಗೆಯಾಡುತ್ತಿದೆ.
ರೈಲ್ವೆ ಪಾಠಕ್ ಕಾಲನಿಯ ನಿವಾಸಿ ಮತೀನ್ ಖಾನ್(27) ರವಿವಾರ ಬೆಳಿಗ್ಗೆ ತನ್ನ ಮನೆಯೆದುರು ಹಲ್ಲುಜ್ಜುತ್ತಿದ್ದಾಗ ಪೊಲೀಸರು ಆತನನ್ನು ಎಳೆದೊಯ್ದಿದ್ದರು. ಆತನ ತಾಯಿ ಜಮೀನಿ ಬೇಗಂ ಠಾಣೆಯ ಎದುರಿನ ಫುಟ್‌ಪಾತ್‌ನಲ್ಲಿ ಕುಳಿತುಕೊಂಡು ಮಗನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ತನ್ನ ಮಗ ಅಮಾಯಕ, ಇದು ಪೊಲೀಸರ ದಬ್ಬಾಳಿಕೆ ಎಂದು ಪತ್ರಕರ್ತರೆದುರು ಆರೋಪಿಸಿದ್ದಾರೆ. ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಮತೀನ್ ಸೇರಿದಂತೆ 87 ಜನರನ್ನು ಜಿಲ್ಲಾದ್ಯಂತ ಬಂಧಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಕೋಮುಹಿಂಸೆ ಕುರಿತು ಎಫ್‌ಐಆರ್ ದಾಖಲಾಗಿರುವ ಕೋತ್ವಾಲಿ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ದ್ದಾರೆ.
ಜಮೀನಿ ಬೇಗಂ ಪಕ್ಕದಲ್ಲಿಯೇ ಕುಳಿತಿರುವ ರಮಾದೇವಿ(52) ತನ್ನ ಕಿರಿಯ ಪುತ್ರ ಜೋಗಿಂದರ್(18) ಕುರಿತು ಸುದ್ದಿಗಾಗಿ ಕಾಯುತ್ತಿದ್ದಾಳೆ. ಜೋಗಿಂದರ್ ಇನ್ನೂ ವಿದ್ಯಾರ್ಥಿ. ಸದಾ ಓದಿನಲ್ಲಿಯೇ ಮುಳುಗಿರುವ ಅವನಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೂ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದವರು ಆರೋಪಿಸಿದ್ದಾರೆ.
ಜಮೀನಿ ಬೇಗಂ ಮತ್ತು ರಮಾದೇವಿ ಅವರ ಜೊತೆ ಹಿಂದು ಮತ್ತು ಮುಸ್ಲಿಂ ಸಮುದಾಯಗಳಿಗೆ ಸೇರಿದ ಇನ್ನೂ ಸುಮಾರು 50 ಮಹಿಳೆಯರು ರವಿವಾರ ಅಲ್ಲಿ ಜಮಾಯಿಸಿದ್ದರು. ಅವರಲ್ಲಿ ಬಂಧಿತರ ತಾಯಂದಿರು, ಪತ್ನಿಯರು ಮತ್ತು ಸೋದರಿಯರು ಸೇರಿದ್ದರು. ತಮ್ಮನ್ನು ಫುಟ್‌ಪಾತ್‌ನಿಂದ ತೆರವುಗೊಳಿಸುವ ಪೊಲೀಸರ ಯಾವುದೇ ಪ್ರಯತ್ನಗಳಿಗೂ ಈ ಮಹಿಳೆಯರು ಮಣಿದಿಲ್ಲ.
‘‘ಎಲ್ಲವೂ ಇಲ್ಲಿಯೇ ಇದೆ, ಅದನ್ನು ಬಿಟ್ಟು ನಾನು ಹೇಗೆ ಹೋಗಲಿ’’ ಎಂದು ಇನ್ನೋರ್ವ ಬಂಧಿತನ ತಾಯಿ ಸುನೀತಾದೇವಿ ಕಂಬನಿ ಮಿಡಿದರು.
ಇತ್ತ ಠಾಣೆಯ ಹೊರಗೆ ಈ ಮಹಿಳೆಯರು ತಮ್ಮ ಪ್ರೀತಿಪಾತ್ರರಿಗಾಗಿ ಕಾಯುತ್ತಿದ್ದರೆ ಅತ್ತ ಠಾಣೆಯೊಳಗೆ ಲಾಕಪ್‌ನಲ್ಲಿ ಬಂಧಿತರು ತಮ್ಮ ಬಿಡುಗಡೆಗಾಗಿ ಆಸೆಗಣ್ಣುಗಳಿಂದ ಕಾಯುತ್ತಲೇ ಇದ್ದರು.
ಬಂಧಿತರ ಪೈಕಿ ಮುಹಮ್ಮದ್ ನಸೀರುದ್ದೀನ್ ಖಾನ್(70) ಠಾಣೆಯ ರೆಕಾರ್ಡ್ ರೂಮ್‌ನಲ್ಲಿ ತನ್ನ ಬಿಡುಗಡೆಗಾಗಿ ಕಾಯುತ್ತಿದ್ದರು. ‘‘ನಾನು ಹೃದಯರೋಗಿ,ಮೇಲಿಂದ ಅಸ್ತಮಾ ಕೂಡ ಕಾಡುತ್ತಿದೆ. ಈ ಘರ್ಷಣೆಗಳಿಗೂ ನನಗೂ ಯಾವುದೇ ಸಂಬಂಧವೇ ಇಲ್ಲ’’ ಎನ್ನುತ್ತಿದ್ದಂತೆ ಗದ್ಗದಿತರಾದ ಅವರಿಗೆ ಮುಂದೆ ಮಾತನಾಡಲೂ ಸಾಧ್ಯವಾಗಲಿಲ್ಲ. ಸಮೀಪದಲ್ಲಿಯೇ ಇದ್ದ ಮಗ ಅಕ್ರಂ(22) ತಂದೆಗೆ ಆಸರೆ ನೀಡಲು ತನ್ನ ತೋಳುಗಳನ್ನು ಚಾಚಿದ್ದನಾದರೂ ಅಲ್ಲಿಯೇ ಇದ್ದ ಕಾನ್‌ಸ್ಟೇಬಲ್ ಆತನನ್ನು ಗದರಿಸಿದ್ದ.
ಕೆಲವು ಕ್ಷಣಗಳ ಬಳಿಕ ಕೆಲವು ಮಹಿಳೆಯರು ಬುತ್ತಿಯ ಗಂಟುಗಳೊಂದಿಗೆ ಲಾಕಪ್ ಬಳಿ ಹೋಗಲು ಪ್ರಯತ್ನಿಸಿದಾಗ ಠಾಣೆಯ ಅಂಗಳದಲ್ಲಿ ಕೋಲಾಹಲದ ದೃಶ್ಯ ಸೃಷ್ಟಿಯಾಗಿತ್ತು. ತಮ್ಮ ಮಕ್ಕಳಿಗೆ ಆಹಾರ ನೀಡಲೂ ಪೊಲೀಸರು ಅವರಿಗೆ ಅನುಮತಿ ಸಲಿಲ್ಲ.
ಹೊರಗಿನ ಗಲಾಟೆ ಒಳಗೆ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ವ್ಯಸ್ತನಾಗಿದ್ದ ಠಾಣಾಧಿಕಾರಿಯನ್ನು ಕೆರಳಿಸಿತ್ತು. ಆತನ ಆದೇಶದ ಮೇರೆಗೆ ಪೊಲೀಸರು ಈ ಮಹಿಳೆಯರನ್ನು ವಾಪಸ್ ಫುಟ್‌ಪಾತ್‌ಗೆ ಕಳುಹಿಸಿದರು.
ಘಟನೆಯ ಬಗ್ಗೆ ನಿಮಗೇನು ಅನಿಸುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಗುಂಪಿನಲ್ಲಿದ್ದ ವೃದ್ಧ ಮಹಿಳೆ,ಏನಾಗಿದೆಯೋ ಅದು ತಪ್ಪು ಹೌದು. ಆದರೆ ಅದರ ಶಿಕ್ಷೆ ಎಲ್ಲರಿಗೂ ಏಕೆ ಎಂದು ಮರುಪ್ರಶ್ನಿಸಿದರು.