ಗಂಗೊಳ್ಳಿ ಪರಿಸರದಲ್ಲಿ ಮದ್ಯ ಮಾರಾಟ ನಿಷೇಧ
ಉಡುಪಿ, ಜ.29: ಕುಂದಾಪುರ ತಾಲೂಕು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ ಹಾಗೂ ಹೊಸಾಡು ಗ್ರಾಮಗಳ ವ್ಯಾಪ್ತಿಯಲ್ಲಿ ಜ.30ರ ಬೆಳಗ್ಗೆ 6:00ರಿಂದ 31ರ ಬೆಳಗ್ಗೆ 6:00 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಬಾರ್‌ಗಳನ್ನು ಬಂದ್ ಮಾಡುವಂತೆ ಹಾಗೂ ಈ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ ಹಾಗೂ ಹೊಸಾಡು ಗ್ರಾಮ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿದ್ದು, ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಈ ವರ್ಷ ಗಂಗೊಳ್ಳಿಯ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾನೋಜಿಯವರಿಗೂ ಮತ್ತು ಗಂಗೊಳ್ಳಿ ಕೊಂಕಣ ಖಾರ್ವಿ ಸಮಾಜದ ವರಿಗೂ ತೀವ್ರ ವೈಮನಸ್ಸು ಉಂಟಾಗಿದ್ದು, ಇದರೊಂದಿಗೆ ಕೆಲ ದಿನಗಳ ಹಿಂದೆ ಗಂಗೊಳ್ಳಿ ಪರಿಸರದಲ್ಲಿ ಕೋಮು ವಿಚಾರ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ಊರ ಮತ್ತು ಪರವೂರಿನ 10,000ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇರುವುದರಿಂದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯದಂಗಡಿ ಹಾಗೂ ಬಾರ್‌ಗಳನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರು.