ಕರ್ನಾಟಕ ವಿರುದ್ಧ ನಿರ್ಣಯ ಅಂಗೀಕಾರ: ಗೋವಾ ಉಪ ಸ್ಪೀಕರ್
ಪಣಜಿ, ಜ. 29: ಮಹಾದಾಯಿ ನದಿ ನೀರನ್ನು ಮಲಪ್ರಭ ಜಲಾನಯನ ಪ್ರದೇಶಕ್ಕೆ ತಿರುಗಿಸುತ್ತಿರುವ ಕರ್ನಾಟಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಗೋವಾ ವಿಧಾನ ಸಭೆಯ ಉಪ ಸ್ಪೀಕರ್ ಮೈಕೆಲ್ ಲೋಬೊ, ಬಜೆಟ್ ಅಧಿವೇಶನದಲ್ಲಿ ಇದರ ವಿರುದ್ಧ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸ್ಪೀಕರ್ ಪ್ರಮೋದ್ ಸಾವಂತ್ ಹಾಗೂ ಗೋವಾದ ಇತರ ಇಬ್ಬರು ಶಾಸಕರೊಂದಿಗೆ ರವಿವಾರ ಕರ್ನಾಟಕದ ಕಣಕುಂಬಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಲುವೆ ನಿರ್ಮಿಸುವ ಮೂಲಕ ಕರ್ನಾಟಕ ಸರಕಾರ ಕಣಕುಂಬಿಯಲ್ಲಿ ಮಹಾದಾಯಿ ನದಿ ನೀರನ್ನು ಸಂಪೂರ್ಣವಾಗಿ ತಿರುಗಿಸುತ್ತಿದೆ. ಗೋವಾದ ಕಡೆ ನೀರು ಹರಿಯುತ್ತಿರುವುದು ಅತ್ಯಲ್ಪ. ಮಹಾದಾಯಿ ನದಿ ನೀರನ್ನು ತಿರುಗಿಸಿರುವುದನ್ನು ಸ್ಥಗಿತಗೊಳಿಸದೇ ಇದ್ದರೆ ಗೋವಾ ಮರುಭೂಮಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ನದಿ ನೀರು ತಿರುಗಿಸಿರುವುದನ್ನು ವಿರೋಧಿಸಿ ನಾವು ಮುಂದಿನ ವಿಧಾನ ಸಭೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಿದ್ದೇವೆ. ಈ ಬಗ್ಗೆ ಆಡಳಿತಾರೂಢ ಬಿಜೆಪಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಣಕುಂಬಿ ಅಣೆಕಟ್ಟು ಕರ್ನಾಟಕದ ಪ್ರಸ್ತಾಪಿತ ಯೋಜನೆ. ಇದಕ್ಕೆ ಗೋವಾ ವಿರೋಧ ವ್ಯಕ್ತಪಡಿಸುತ್ತಿದೆ.