×
Ad

ಮಂಗಳೂರು; ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ : ಅಪರಾಧಿಗೆ 7 ವರ್ಷ ಕಠಿಣ ಸಜೆ

Update: 2018-01-29 20:49 IST

ಮಂಗಳೂರು,ಜ. 29: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರಗೈದ ಪ್ರಕರಣದ ಆರೋಪಿಗೆ ದ.ಕ.ಜಿಲ್ಲಾ ಎರಡನೇ ಸತ್ರ ಮತ್ತು ವಿಶೇಷ ನ್ಯಾಯಾಲಯವು 7 ವರ್ಷ ಕಠಿಣ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಬಜ್ಪೆ ಸಮೀಪದ ಕರಂಬಾರು ಅಂಬೇಡ್ಕರ್ ನಗರದ ಚಂದ್ರಶೇಖರ (47) ಶಿಕ್ಷೆಗೊಳಗಾದ ಅಪರಾಧಿ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ(ಪೋಕ್ಸೋ)ಯಡಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿವರ: ಮಳವೂರು ಗ್ರಾಮದ ಕರಂಬಾರು ಅಂಬೇಡ್ಕರ್ ನಗರದ ಚಂದ್ರಶೇಖರ್ ಎಂಬಾತ ತನ್ನ 17 ವರ್ಷದ ಮಗಳ ಮೇಲೆ 2014ರ ಮಾರ್ಚ್ ತಿಂಗಳಿನಿಂದ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ. ಬಾಲಕಿಯ ತಾಯಿ ತೀರಿಹೋಗಿದ್ದು, ತಂದೆ ಹಾಗೂ ಚಿಕ್ಕಮ್ಮ (ತಾಯಿಯ ಸಹೋದರಿ)ನೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಚಿಕ್ಕಮ್ಮ ಹೊರಗೆ ಕೆಲಸಕ್ಕೆ ಹೋದ ಬಳಿಕ ತಂದೆ ಚಂದ್ರಶೇಖರ್ ಮನೆಯಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಪದೇ ಪದೇ ತಂದೆಯ ಈ ಕೃತ್ಯದಿಂದ ನೊಂದ ಬಾಲಕಿ ರಕ್ಷಣೆಗಾಗಿ ಚೈಲ್ಡ್‌ಲೈನ್ ಸಂಸ್ಥೆಗೆ ಮೊರೆ ಹೋಗಿದ್ದು, ಕೂಡಲೇ ಸಂಸ್ಥೆಯವರು ಆಕೆಯನ್ನು ಬಜ್ಪೆ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ 16 ಸಾಕ್ಷಿಗಳ ವಿಚಾರಣೆ ನಡೆಸಿದ ಎರಡನೆ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಆರೋಪಿ ಚಂದ್ರಶೇಖರನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ತೀರ್ಪು ಪ್ರಕಟಿಸಿದ್ದಾರೆ.

ದಂಡದಲ್ಲಿ 20 ಸಾವಿರ ರೂ. ನೊಂದ ಬಾಲಕಿಗೆ ನೀಡಲು ಸೂಚಿಸಲಾಗಿದ್ದು, ತಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳ ಕಠಿಣ ಸಜೆ ವಿಧಿಸಲು ಆದೇಶಿಸಲಾಗಿದೆ. ಅಲ್ಲದೆ ಬಾಲಕಿಗೆ ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಸರಕಾರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News