×
Ad

ಗುತ್ತಿಗೆ ಸಫಾಯಿ ಕರ್ಮಚಾರಿಗಳ ಖಾಯಂಗೆ ಪ್ರಯತ್ನ: ವೆಂಕಟೇಶ್

Update: 2018-01-29 21:42 IST

ಉಡುಪಿ, ಜ.29: ರಾಜ್ಯದ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಖಾಯಂಗೊಳಿಸುವ ಕುರಿತಂತೆ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ಪ್ರಯತ್ನಿಸಲಾಗುತ್ತಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ.

ಸೋಮವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲೆ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳನ್ನು ಸಂದರ್ಶಿಸಿ,ಅವರ ಕುಂದು ಕೊರತೆ ಹಾಗೂ ಬೇಡಿಕೆಗಳ ಕುರಿತು ಆಯೋಗ ವತಿಯಿಂದ ಮಾಹಿತಿ ಸಂಗ್ರಹಿಸಲಾಗಿದೆ.ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಕಾನೂನುಬದ್ದವಾಗಿ ಪೌರಕಾರ್ಮಿಕರಿಗೆ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಆಯೋಗ ಕೆಲಸ ಮಾಡುತ್ತಿದೆ ಎಂದು ವೆಂಕಟೇಶ್ ಹೇಳಿದರು.

ರಾಜ್ಯದಲ್ಲಿ ಹೆಚ್ಚು ವೇತನ:ರಾಜ್ಯದ ಸಫಾಯಿ ಕರ್ಮಚಾರಿಗಳಿಗೆ ಇಡೀ ದೇಶದಲ್ಲೇ ಅತೀ ಹೆಚ್ಚು ಕನಿಷ್ಠ ವೇತನ ನೀಡಲಾಗುತ್ತಿದ್ದು, ಖಾಯಂ ಪೌರಕಾರ್ಮಿಕರಿಗೆ ಗೃಹಬಾಗ್ಯ ಯೋಜನೆ ಮೂಲಕ ನಿವೇಶನ ಇದ್ದರೆ, ಮನೆ ನಿರ್ಮಾಣಕ್ಕೆ 7.5 ಲಕ್ಷ, ಹೊರಗುತ್ತಿಗೆ ನೌಕರರಿಗೆ 5.5 ಲಕ್ಷ ನೀಡಲಾಗುತ್ತಿದೆ. ಸಫಾಯಿ ಕರ್ಮಚಾರಿಗಳಿಗೆ ಬೆಳಗಿನ ಉಪಹಾರ ಯೋಜನೆ, 3 ತಿಂಗಳಿಗೊಮ್ಮೆ ಸಮಗ್ರ ಆರೋಗ್ಯ ತಪಾಸಣೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸ್ಥಳೀಯ ಸಂಸ್ಥೆಗಳಲ್ಲಿ ಶೇ.24.10ರಲ್ಲಿ ಶೇ.20 ರಷ್ಟು ಮೊತ್ತವನ್ನು ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕೆ ಮೀಸಲಿಡಲಾಗಿದೆ ಎಂದರು.

ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ದಿಗಾಗಿ, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಪ್ರಾರಂಭಿಸಿದ್ದು,ಈ ಮೂಲಕಮನೆ ನಿರ್ಮಾಣ, ವಾಹನ ಖರೀದಿಗೆ ಸಬ್ಸಿಡಿ ಸಹಿತ ಸಾಲ, ಸ್ವಉದ್ಯೋಗ ತರಬೇತಿ ಪಡೆಯಲು ಕೌಶಲಾಭಿವೃಧ್ದಿ ತರಬೇತಿ ನೀಡಲಾಗುತ್ತಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳು ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಶಿಕ್ಷಣ ಪಡೆಯಲು ಶಾಲಾ ವೆಚ್ಚ ಮರು ಪಾವತಿಸಲಾಗುತ್ತಿದ್ದು, 6ನೇ ತರಗತಿಯಿಂದ ಪಿಯುಸಿವರೆಗೆ ಕಿತ್ತೂರು ಚೆನ್ನಮ್ಮ, ಮೊರಾರ್ಜಿ ದೇಸಾಯಿ ಮುಂತಾದ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಶೇ.5 ರಷ್ಟು ಸೀಟ್‌ಗಳನ್ನು ಮೀಸಲಿಡಲಾಗಿದೆ ಎಂದು ವೆಂಕಟೇಶ್ ನುಡಿದರು.

ಶೇ.80 ಅಕಾಲಿಕ ಮರಣ: ಸಫಾಯಿ ಕರ್ಮಚಾರಿಗಳಾಗಿ ಕೆಲಸಕ್ಕೆ ಸೇರುವ ಶೇ.20ರಷ್ಟು ಮಂದಿ ಮಾತ್ರ ನಿವೃತರಾಗುತ್ತಿದ್ದು, ಉಳಿದ ಶೇ.80 ಮಂದಿ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಚಿಕಿತ್ಸೆಗಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆಲಸ ನಿರ್ವಹಿಸಲು 21 ಸಲಕರಣೆಗಳುಳ್ಳ ಸೂಕ್ತ ಸುರಕ್ಷಾ ಕಿಟ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಈ ಸೌಲಭ್ಯಗಳ ಕುರಿತು ಸಫಾಯಿ ಕರ್ಮಚಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಸೌಲ್ಯಗಳನ್ನು ಒದಗಿಸುವಂತೆ ವೆಂಕಟೇಶ್ ಸೂಚಿಸಿದರು.

ಯುಜಿಡಿಯಲ್ಲಿ ಕೆಲಸ ನಿರ್ವಹಿಸಲು ಸೂಕ್ತ ರಕ್ಷಣಾ ಕಿಟ್ ನೀಡುವಂತೆ, ರಾಷ್ಟ್ರೀಯ ಹಬ್ಬಗಳಂದು ರಜೆ ನೀಡುವಂತೆ, ಮನೆ ನಿರ್ಮಾಣಕ್ಕೆ ನಿವೇಶನ ನೀಡುವಂತೆ, ನಿಯಮಿತವಾಗಿ ಸಮಗ್ರ ಆರೋಗ್ಯ ಪರೀಕ್ಷೆ ನಡೆಸುವ ಕುರಿತಂತೆ ಸಭೆಯಲ್ಲಿದ್ದ ಸಫಾಯಿ ಕರ್ಮಚಾರಿಗಳು ಅಧ್ಯಕ್ಷರನ್ನು ಕೋರಿದರು.
ಉಡುಪಿ ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ ಮನೆ ನಿರ್ಮಣಕ್ಕೆ ಸೂಕ್ತ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ವೆಂಕಟೇಶ್, ಬೆಳಗಿನ ಉಪಹಾರ, ಅವರಿಗೆ ಸೂಕ್ತ ರಜಾ ಸೌಲಭ್ಯ ಹಾಗೂ ಅವರ ಪಿಎಫ್ ಖಾತೆಗೆ ಸರಿಯಾಗಿ ಹಣ ಜಮಾವಣೆ ಆಗುವ ಕುರಿತು ಪರಿಶೀಲಿಸಿ, ಇಎಸ್‌ಐ ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ಸ್ಥಳೀಯಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಅಯೋಗದ ಸದಸ್ಯ ನಾರಾಯಣ ಸ್ವಾಮಿ, ಸಂಶೋಧನಾ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು. ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ ಸ್ವಾಗತಿಸಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News