ಅಮೆರಿಕದ ರಕ್ಷಣಾ ನೆರವು ಪಾಕ್ ಸೇನಾಧಿಕಾರಗಳಿಗೆ ನೀಡುತ್ತಿದ್ದ ‘ಲಂಚ’!

Update: 2018-01-29 18:04 GMT

 ವಾಶಿಂಗ್ಟನ್, ಜ. 29: ದಶಕಕ್ಕೂ ಅಧಿಕ ಕಾಲ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ರಕ್ಷಣಾ ನೆರವು ಪಾಕಿಸ್ತಾನದ ಸೇನಾಧಿಕಾರಿಗಳಿಗೆ ನೀಡುತ್ತಿದ್ದ ಒಂದು ರೀತಿಯ ‘ಕಾನೂನುಬದ್ಧ ಲಂಚ’ವಾಗಿತ್ತು ಎಂದು ಅಮೆರಿಕದ ಅಫ್ಘಾನ್ ಯುದ್ಧ ಮತ್ತು ಅದರ ಒಂದು ಕಾಲದ ಮಿತ್ರ (ಪಾಕಿಸ್ತಾನ)ನ ಕುರಿತ ನೂತನ ಪುಸ್ತಕವೊಂದು ಹೇಳಿದೆ.

ಲೇಖಕ ಸ್ಟೀವ್ ಕಾಲ್ ಅವರ ನೂತನ ಪುಸ್ತಕ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಪೂರಕವಾಗಿ ಪಾಕಿಸ್ತಾನ ನಡೆಸುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ತಗಲಿದ ವೆಚ್ಚವಾಗಿ ಅಮೆರಿಕ ಬಿಲಿಗಟ್ಟಳೆ ಹಣವನ್ನು ಈವರೆಗೆ ಪಾಕಿಸ್ತಾನಕ್ಕೆ ನೀಡಿದೆ.

ಆದಾಗ್ಯೂ, ಇತ್ತೀಚೆಗೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸೇನಾ ನೆರವಾಗಿ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ಸುಮಾರು 2 ಬಿಲಿಯ ಡಾಲರ್ (ಸುಮಾರು 12,738 ಕೋಟಿ ರೂಪಾಯಿ) ಮೊತ್ತವನ್ನು ಸ್ಥಗಿತಗೊಳಿಸಿದೆ.

2002ರಿಂದ ಸೇನಾ ನೆರವಾಗಿ 33 ಬಿಲಿಯ ಡಾಲರ್ (ಸುಮಾರು 2.1 ಲಕ್ಷ ಕೋಟಿ ರೂಪಾಯಿ)ನ್ನು ಪಾಕಿಸ್ತಾನ ಅಮೆರಿಕದಿಂದ ಪಡೆದುಕೊಂಡರೂ, ಅದು ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಗ್ರಹಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂಬುದಾಗಿ ಅಮೆರಿಕ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News