ದೇವರ ಹೆಸರಿನಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಸುವವರು ಅಜ್ಞಾನಿಗಳು: ಶ್ರೀಬಸವಲಿಂಗ ಮೂರ್ತಿ ಸ್ವಾಮೀಜಿ
ಬಂಟ್ವಾಳ, ಜ. 30: ದೇವರ ಹೆಸರಿನಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವವರು ಅಜ್ಞಾನಿಗಳು. "ದೇವರು" ಎಂಬ ಪದದ ಬಗ್ಗೆ ಅರ್ಥ ಗೊತ್ತಿಲ್ಲದವರು ಮಾತ್ರ ದೇವ-ದೇವರುಗಳನ್ನು ಒಂದೊಂದು ಮತ-ಧರ್ಮಕ್ಕೆ ಸೀಮಿತಗೊಳಿಸಿಕೊಳ್ಳುತ್ತಾರೆ ಎಂದು ಮೈಸೂರು ಬಸವ ಜ್ಞಾನ ಮಂದಿರದ ಶ್ರೀಬಸವಲಿಂಗ ಮೂರ್ತಿ ಸ್ವಾಮೀಜಿ ಹೇಳಿದ್ದಾರೆ.
ದಫ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್, ಯೂತ್ ಫ್ರೆಂಡ್ಸ್ ಗುಡ್ಡೆಅಂಗಡಿ ಹಾಗೂ ಕರಾವಳಿ ಟೈಮ್ಸ್ ಪತ್ರಿಕಾ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು ಸಮೀಪದ ಆಲಡ್ಕ ಮೈದಾನದ ಮರ್‌ಹೂಂ ಕೆ.ಎಂ. ಇಕ್ಬಾಲ್ ಮಾಸ್ಟರ್ ವೇದಿಕೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಹೊನಲು ಬೆಳಕಿನ ದಫ್ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ ಹಾಗೂ ಸೌಹಾರ್ದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ ಎಂಬ ಪದದ ಆರ್ಥವೇ ಸರ್ವರಿಗೂ ದಯೆ, ಕರುಣೆ ತೋರುವುದಾಗಿದೆ. ಧಾರ್ಮಿಕ ಮುಖಂಡರು ಒಂದು ಸಮಾಜಕ್ಕೆ, ಒಂದು ಧರ್ಮಕ್ಕೆ ಸೀಮಿತ ವಾಗಿ ಹೋಗಿದ್ದಾರೆ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ಪ್ರೀತಿಸದವರು ಅದು ಹೇಗೆ ಧಾರ್ಮಿಕ ಮುಖಂಡರು, ಸನ್ಯಾಸಿಗಳಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬುದ್ಧಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಕ್ಷರಸ್ಥರಿಗಿಂತ ತಿಳಿದವರಿಂದಲೇ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ದೇವರು ಒಬ್ಬನೇ ನಾಮ ಹಲವು ಎಂಬ ಸತ್ಯ ಗೊತ್ತಿದ್ದೂ ಅಂತಹ ವಿಚಾರಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಒಂದು ರೀತಿಯ ಅಲ್ಲೋಲ ಕಲ್ಲೋಲ ಉಂಟು ಮಾಡುವ ಜನರೂ ಇದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಲಡ್ಕ ಎಂಜೆಎಂ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಮಾತನಾಡಿ, ಪವಿತ್ರ ಇಸ್ಲಾಮಿನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ದಫ್ ಕಲೆಗೆ ಇಸ್ಲಾಮಿನ ನಾಲ್ಕೂ ಮದ್ಸ್‌ಹಬ್‌ಗಳಲ್ಲೂ ಅನುವದನೀಯ ಮುದ್ರೆಯನ್ನು ಒತ್ತಲಾಗಿದೆ. ಸ್ಪರ್ಧಾ ರೂಪದಲ್ಲಿ ದಫ್ ಕಲೆಯನ್ನು ಉಳಿಸಿ ಬೆಳೆಸಲು ಹಮ್ಮಿಕೊಂಡ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸೂಫಿ ಮತ್ತು ಶರಣ ಸಂತರ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗುಡ್ಡೆಅಂಗಡಿ ಎನ್.ಜೆ.ಎಂ. ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಮಾಜಿ ಸದಸ್ಯ ಎಫ್. ಉಮರ್ ಫಾರೂಕ್ ಫರಂಗಿಪೇಟೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಕರಂಬಾರು, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಎನ್.ಎಸ್. ಕರೀಂ, ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ನೆಹರೂನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್, ಬಂಟ್ವಾಳ ವಿಜಯಾ ಬ್ಯಾಂಕ್ ಶಾಖಾಧಿಕಾರಿ ಬೇಬಿ ಕುಂದರ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶಿರ್ ಪೇರಿಮಾರ್, ಸದಸ್ಯ ರಮ್ಲಾನ್ ಮಾರಿಪಳ್ಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಬುಡಾ ಸದಸ್ಯ ಲತೀಫ್ ಖಾನ್ ಗೂಡಿನಬಳಿ, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಇರ್ಶಾದ್ ಗುಡ್ಡೆಅಂಗಡಿ, ಮಂಚಿ ಗ್ರಾಪಂ ಸದಸ್ಯ ಜಿ.ಎಂ. ಇಬ್ರಾಹಿಂ, ಪಾಣೆಮಂಗಳೂರು ಬ್ಲಾಕ್ ಇಂಟಕ್ ಅಧ್ಯಕ್ಷ ಎನ್. ಅಬ್ದುಲ್ ಕರೀಂ ಬೊಳ್ಳಾಯಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದೀಕ್ ಸರವು, ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಎನ್.ಬಿ. ಅಬೂಬಕರ್, ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್ ಫ್ಯಾಶನ್ ಗೋಲ್ಡ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಟಿ.ಯು. ಇಸ್ಮಾಯಿಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ಮನಪಾ ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕರ್ ಸಜಿಪ ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಕರಂಬಾರು ಉದ್ಘಾಟಿಸಿದರು. ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಮುಹಮ್ಮದ್ ಮಾರಿಪಳ್ಳ, ಅಶ್ರಫ್ ಅಪೊಲೋ ಕಲ್ಲಡ್ಕ, ಜಿ.ಎಂ. ಮುಸ್ತಫಾ ಗೂಡಿನಬಳಿ, ರಶೀದ್ ನಂದಾವರ, ಸಲೀಂ ಬೋಳಂಗಡಿ, ಜಲೀಲ್ ಮುಕ್ರಿ ಉಪ್ಪಿನಂಗಡಿ, ಸತ್ತಾರ್ ಗೂಡಿನಬಳಿ, ಎಂ.ಪಿ. ಬಶೀರ್ ಬಂಟ್ವಾಳ, ಸಲೀಂ ಮಾಣಿ ಕವನ ವಾಚಿಸಿದರು.
ಕರಾವಳಿ ಟೈಮ್ಸ್ ಸಂಪಾದಕ ಪಿ.ಎಂ. ಅಶ್ರಫ್ ಸ್ವಾಗತಿಸಿ, ಮುಸ್ತಫಾ ಯು. ವಂದಿಸಿದರು. ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಪರ್ಲಡ್ಕ ತಂಡಕ್ಕೆ ದಫ್ ಪ್ರಶಸ್ತಿ: ದಫ್ ಸ್ಪರ್ಧೆಯಲ್ಲಿ ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ಪ್ರಥಮ, ಅಡ್ಯಾರ್ ಕಣ್ಣೂರು-ಬೀಡು ಅಹ್ಮದ್ ಬದ್ರ್ ರಿಫಾಯಿ ದಫ್ ತಂಡ ದ್ವಿತೀಯ ಹಾಗೂ ಬಿ.ಸಿ.ರೋಡು-ಕೈಕಂಬದ ರಿಫಾಯಿಯ್ಯ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಉಸ್ಮಾನ್ ಸಖಾಫಿ ಸಜಿಪ, ಎ.ಬಿ.ಎಂ. ಹನೀಫ್ ನಿಝಾಮಿ, ಹೈದರ್ ಸಅದಿ ಅವರು ಸಹಕರಿಸಿದರು.