×
Ad

ಪುತ್ತೂರಿನಲ್ಲಿ ಸೌಹಾರ್ದತೆಗಾಗಿ 'ಮಾನವ ಸರಪಳಿ'

Update: 2018-01-30 19:21 IST

ಪುತ್ತೂರು, ಜ. 30: ಕರ್ನಾಟಕದಲ್ಲಿ ಕೋಮು ಸಾಮರಸ್ಯಕ್ಕಾಗಿ ಶಾಂತಿ ಸಂದೇಶ ಸಾರಲು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮವನ್ನು ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದಂದು ಆಯೋಜಿಸಲಾಗಿದ್ದು, ಪುತ್ತೂರಿನಲ್ಲೂ ಸೌಹಾರ್ದತೆ ಗಾಗಿ ಮಾನವ ಸರಪಳಿ ನಡೆಸಲಾಯಿತು.

ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಮುಖಡರ ಸಹಕಾರದೊಂದಿಗೆ ಸಂಜೆ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಿಂದ - ಮುಖ್ಯ ಅಂಚೆ ಕಚೇರಿ ತನಕ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಯಿತು. ದೇವಸ್ಥಾನ, ಬಸದಿ, ಚರ್ಚ್ ಹಾಗೂ ಮಸೀದಿಯನ್ನೊಳ ಗೊಂಡ ವ್ಯಾಪ್ತಿಯಲ್ಲಿ ಮಾನವನ ಸರಪಳಿ ಹಮ್ಮಿಕೊಳ್ಳಲಾಯಿತು.

ಇಲ್ಲಿನ ಗಾಂಧಿಕಟ್ಟೆಯ ಬಳಿ ಸೇರಿದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕ ಐವನ್ ಲೋಬೊ, ದೇಶ ಕಂಡ ಮಹಾನ್ ಪುರುಷ ಮಹಾತ್ಮ ಗಾಂಧೀಜಿ ಅವರು ದೇಶದ ವಿಮರ್ಶೆಯ ಪ್ರತೀಕ. ಸ್ವಾತಂತ್ರ್ಯ, ಶಾಂತಿ, ಸೌಹಾರ್ದತೆಯ ಭಾರತದ ಕನಸನ್ನು ಕಂಡ ಗಾಂಧೀಜಿಯವರು ಹುತಾತ್ಮರಾದ ದಿನ ಸೌಹಾರ್ದತೆಗಾಗಿ ಮಾನವ ಸರಪಳಿ ನಿರ್ಮಿಸುವುದು ಮಾದರಿ ಸಂದೇಶ ನೀಡುವ ಕಾರ್ಯಕ್ರಮ ಎಂದರು.

ಮತ, ಕೋಮಿನ ಹೆಸರಿನಲ್ಲಿ ದ್ವೇಷವನ್ನು ಹರಡುವ ಸಂಸ್ಕೃತಿ ಈ ಮಣ್ಣಿನ ಬೀಜವೇ ಅಲ್ಲ. ಪರಸ್ಪರ ಪ್ರೀತಿ, ಕೋಮು ಸೌಹಾರ್ದತೆಯ ಕುರಿತು ಮಾತನಾ ಡಿದವರಿಗೆ ಇಂದು ಮೆಕಾಲೆ ಸಂಸ್ಕೃತಿಯವರು ಎನ್ನುವ ಪಟ್ಟ ಕಟ್ಟಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆತ್ಮವಿಮರ್ಶೆಯ ಭಾಗವಾಗಿ ಇಲ್ಲಿ ಸೇರಿರುವುದು ಸಮರ್ಪಕವಾಗಿದೆ ಎಂದರು.

ರಾಜ್ಯ ಮಹಿಳಾ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸೌಹಾರ್ದತೆಯ ಪ್ರತಿಜ್ಞೆ ಬೋಧಿಸಿದರು. ಸಿಪಿಐಎಂ ಮುಖಂಡ ನ್ಯಾಯವಾದಿ ಪಿ. ಕೆ. ಸತೀಶನ್, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ನಗರಸಭಾ ಸದಸ್ಯರಾದ ಜೊಹರಾ ನಿಸಾರ್, ಸ್ವರ್ಣಲತಾ ಹೆಗ್ಡೆ, ಅಹಿಂದ ಸಂಘಟಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಯುವ ಜೆಡಿಎಸ್ ಉಪಾಧ್ಯಕ್ಷ ಅಶ್ರಫ್ ಕಲ್ಲೆಗ, ಕಾಂಗ್ರೆಸ್ ಸೇವಾದಳದ ಸಂಘಟಕ ಜೋಕಿಂ ಡಿಸೋಜಾ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕ ಇಸಾಕ್ ಸಾಲ್ಮರ, ಜೋ ಡಿಸೋಜಾ ಚಿಕ್ಕಪುತ್ತೂರು, ನೆಲ್ಲಿಕಟ್ಟೆ ಬಾಲಕೃಷ್ಣ ರೈ, ಯು. ಲೋಕೇಶ್ ಹೆಗ್ಡೆ, ಇಬ್ರಾಹಿಂ ಪರ್ಪುಂಜ, ಚಂದ್ರಶೇಖರ ಅಂಚನ್, ಬೆಳ್ಳಿಪ್ಪಾಡಿ ಸುಭಾಸ್ ರೈ, ವಂ ವಿಜಯ ಹಾರ್ವಿನ್, ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ನ್ಯಾಯವಾದಿ ಚಿದಾನಂದ ಬೈಲಾಡಿ, ಕಿಟ್ಟಣ್ಣ ಗೌಡ, ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ, ಧರ್ಣಪ್ಪ ಮೂಲ್ಯ, ಪಾವನಾ, ಖಾಸಿಂ ಹಾಜಿ ಮಿತ್ತೂರು, ಹುಸೈನ್ ದಾರಿಮಿ ರೆಂಜಿಲಾಡಿ, ರೋಶನ್ ರೈ ಬನ್ನೂರು, ಜೊಹರಾ ನಿಸಾರ್, ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ಹಂಝ ಕಬಕ, ಇಬ್ರಾಹಿಂ ಪರ್ಪುಂಜ, ಮೋಹನ್ ಗೌಡ, ವಿಜಯ್‌ಕುಮಾರ್ ಮಡಿವಾಳಕಟ್ಟೆ, ನ್ಯಾಯವಾದಿ ಸಾಹಿರಾ ಜುಬೇರ್, ಫಝ್ಲುಲ್ ರಹೀಂ, ಅಬೂಬಕ್ಕರ್ ಆರ್ಲಪದವು, ಪಿ.ಪಿ. ವರ್ಗೀಸ್, ಉಷಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

ಮಾನವ ಬಂಧುತ್ವದ ವೇದಿಕೆಯ ಮುಖಂಡ ಅಮಳ ರಾಮಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News