×
Ad

ವಾರ್ಡ್ ವಾರು ಮೀಸಲಾತಿ ಪಟ್ಟಿಯಲ್ಲಿ ಗೊಂದಲ: ಆರೋಪ

Update: 2018-01-30 19:40 IST

ಬಂಟ್ವಾಳ, ಜ. 30: ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯತ್‌ವೊಂದಾಗಿರುವ ಪುದು ಗ್ರಾಮ ಪಂಚಾಯತ್‌ನ ಆಡಳಿತ ಅವಧಿ ಮುಗಿದ ಹಿನ್ನೆಲೆಯಲ್ಲಿ ಫೆ.18ಕ್ಕೆ ಚುನಾವಣೆ ನಡೆಯಲಿದೆ. ಆದರೆ ವಾರ್ಡ್ ವಾರ್ ಮೀಸಲಾತಿಪಟ್ಟಿ ಬಿಡುಗಡೆಯಾಗಿದ್ದರೂ ಪಟ್ಟಿಯಲ್ಲಿ ಗೊಂದಲ ಉಂಟಾಗಿದೆ ಎಂಬ ಆರೋಪ ಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.

ಪುದು ಗ್ರಾಮ ಪಂಚಾಯತ್‌ನ ಫರಂಗಿಪೇಟೆ, ಅಮ್ಮೆಮಾರ್ ಹಾಗೂ ಕುಮ್ಡೇಲು ವಾರ್ಡ್‌ಗಳಲ್ಲಿ ಮಹಿಳೆ ಹಾಗೂ ಪುರುಷರ ಮೀಸಲಾತಿಯಲ್ಲಿ ಗೊಂದಲ ವುಂಟಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ಈ ಹಿಂದಿನ ಆಡಳಿತಾವಧಿಯಲ್ಲಿ ಪುದು ಗ್ರಾಮ ಪಂಚಾಯತ್ 32 ಸ್ಥಾನಗಳನ್ನು ಹೊಂದಿದ್ದು, ಪ್ರಸ್ತುತ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು 34 ಸ್ಥಾನಗಳಿಗೆ ಏರಿಕೆಯಾಗಿದೆ. ಇದರಿಂದ ವಾರ್ಡ್ ವಾರು ಮೀಸಲಿಟ್ಟ ಮೀಸಲಾತಿ ಪಟ್ಟಿಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

ಪುದು ಗ್ರಾಮ ಪಂಚಾಯತ್ ಈ ಹಿಂದೆ ನಗರ ಪಂಚಾಯತ್ ಆಗುವ ಅವಕಾಶವಿತ್ತಾದರೂ ಜನಸಂಖ್ಯೆಯ ಕೊರತೆಯಿಂದಾಗಿ ಈ ಪ್ರಸ್ತಾವ ನೆನಗುದಿಗೆ ಬಿದ್ದಿತ್ತು. ಸದ್ಯ ಪುದು ಪಂಚಾಯತ್ ಆಗಿಯೇ ಮುಂದುವರಿದಿದೆ. ಕಳೆದ ಬಾರಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದರೆ, 9 ಸ್ಥಾನಗಳಿಗಷ್ಟೆ ಬಿಜೆಪಿ ತೃಪ್ತಿಪಟ್ಟುಕೊಂಡಿತ್ತು. ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿರುವ ಪುದು ಗ್ರಾಮ ಪಂಚಾಯತ್‌ಗೆ ಪುದು, ಕುಂಪನಮಜಲು, ಅಮ್ಮೆಮಾರ್, ಪುಂಚಮೆ-ಅಮ್ಮೆಮಾರ್, ಫರಂಗೀಪೇಟೆ, ಸುಜೀರ್, ಪೆರಿಮಾರ್, ಕುಂಜತ್ಕಳ, ಕುಮ್ಡೇಲು, ನೆತ್ತರಕೆರೆ, ಮಾರಿಪಳ್ಳ ಪ್ರದೇಶದ ಹತ್ತು ವಾರ್ಡ್ ಗಳಿದ್ದು, ಸುಮಾರು 13 ಸಾವಿರ ಮತದಾರರನ್ನು ಹೊಂದಿವೆ.

ವಾರ್ಡ್ ವಾರ್ ಮೀಸಲಾತಿ ಪಟ್ಟಿ ಬಿಡುಗಡೆಯಾಗಿದ್ದರೂ ಫರಂಗಿಪೇಟೆ, ಅಮ್ಮೆಮಾರ್ ಹಾಗೂ ಕುಮ್ಡೇಲು ವಾರ್ಡ್‌ಗಳಲ್ಲಿ ಮಹಿಳೆ ಹಾಗೂ ಪುರುಷರ ಮೀಸಲಾತಿಯಲ್ಲಿ ಗೊಂದಲ ವುಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನವಾರ ಅಧಿಕೃತ ಮೀಸಲಾತಿಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಚುನಾವಣೆಗಾಗಿ ತಾಲೂಕಾಡಳಿತವು ಸಂಪೂರ್ಣ ಸಜ್ಜಾಗಿದೆ.
 
ಫೆ. 20ಕ್ಕೆ ಮತ ಎಣಿಕೆ: ಅವಧಿ ಮುಕ್ತಾಯಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಸೇರಿದಂತೆ ಹಾಸನ ಜಿಲ್ಲೆ ಸಕಲೇಶಪುರದ ವಣಗೂರು, ಉಚ್ಚಂಗಿ, ದಾವಣಗೆರೆಯ ಹರಪ್ಪನಹಳ್ಳಿಯ ಹಾರಕನಾಳು ಗ್ರಾಪಂ ಸೇರಿದಂತೆ ಒಟ್ಟು 7 ಗ್ರಾ.ಪಂ. ಗಳಿಗೆ ಫೆ.18ಕ್ಕೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗವು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ.

ಆಯಾ ಜಿಲ್ಲಾಧಿಕಾರಿಗಳು ಫೆ.5ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ. ಫೆ.8ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯದಿನ. ಫೆ.9ಕ್ಕೆ ನಾಮಪತ್ರ ಪರಿಶೀಲನೆ, ಫೆ.12ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಫೆ.18ರ ರವಿವಾರ ಚುನಾವಣೆ ನಡೆಯಲಿದೆ. ಫೆ.20ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಫೆ.5ರಿಂದ ಫೆ.20ರ ವರೆಗೆ ಚುನಾವಣಾ ನಡೆಯಲಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಯಾವುದೆಲ್ಲ ಗ್ರಾ.ಪಂ.ಗಳು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು, ಹಾಸನ ಜಿಲ್ಲೆಯ ವಣಗೂರು-ಉಚ್ಚಂಗಿ, ದಾವಣಗೆರೆಯ ಹಾರಕನಾಳು, ಬೆಂಗಳೂರು ಗ್ರಾ. ಜಿಲ್ಲೆ ದೇವನಹಳ್ಳಿಯ ಹಾರೋಹಳ್ಳಿ, ಕೋರಮಂಗಲ ಹಾಗೂ ವಿಜಯಪುರ ಜಿಲ್ಲೆಯ ಇಂಗಳಗೇರಿ ಗ್ರಾ.ಪಂ.ಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News