×
Ad

ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದ ವಿಕಾಸ ಪುರುಷ ಪಕೋಡ ಮಾರಲು ಹೊರಟಿದ್ದಾರೆ: ದಿನೇಶ್ ಅಮೀನ್ ಮಟ್ಟು

Update: 2018-01-30 20:40 IST

ಮಂಗಳೂರು, ಜ. 30: ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದ ವಿಕಾಸ ಪುರುಷ ಪಕೋಡ ಮಾರಲು ಹೊರಟಿದ್ದಾರೆ. ಯುವಜನರು ಕೋಮುವಾದಿ ಸಂಘಟನೆಗಳ ಕಾಲಾಳುಗಳಾಗಿ ಬಲಿಪಶುಗಳಾಗುವುದನ್ನು ತಪ್ಪಿಸಬೇಕಾಗಿದೆ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ. 

ರಾಜ್ಯದ ವಿವಿಧ ಸಂಘಟನೆಗಳು ಸೌಹಾರ್ದತೆಗಾಗಿ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಸೌಹಾರ್ದ ಸಮಾವೇಶವನ್ನುದ್ದೇಶಿಸಿ ಅವರು ಇಂದು ಮಾತನಾಡುತಿದ್ದರು.

ನಾಡಿನಲ್ಲಿ ಬಹು ಹಿಂದಿನಿಂದಲೂ ಗಟ್ಟಿಯಾದ ಸೌಹಾರ್ದತೆಯ ಪರಂಪರೆ ಇದೆ. ಆದರೆ ಈಗ ಮತ್ತೆ ಸೌಹಾರ್ದತೆಗಾಗಿ ಮಾನವ ಸರಪಳಿ ರಚಿಸಬೇಕಾಗಿ ಬಂದಿರುವುದು ನಮ್ಮ ದುರಂತ. ಬಾಬ್ರಿ ಮಸೀದಿಯ ಧ್ವಂಸದ ಬಳಿಕ ಕಳೆದ 25 ವರ್ಷಗಳಿಂದ ಒಂದಲ್ಲ ಒಂದು ರೀತಿಯ ಕೋಮು ಗಲಭೆಯಿಂದ ನಾವು ದಹಿಸುತ್ತಿದ್ದೇವೆ. ಇಂದು ಗಾಂಧಿ ಹತ್ಯೆಯಾದ ದಿನ ದೇಶದಲ್ಲಿ ನಿರಂತರವಾಗಿ ಗಾಂಧಿಯ ತತ್ವಗಳನ್ನು ಬಲಿಕೊಡುವ ಕೆಲಸ ನಡೆಯುತ್ತಿದೆ. ಗಾಂಧಿ ಹೇಳಿದ ಸರಳತೆಯ ಬದುಕು, ಕೋಮು ಸೌಹಾರ್ದತೆ, ದಲಿತ ಮೇಲಿನ ದೌರ್ಜನ್ಯ ಕೊನೆಗಾಣಿಸಬೇಕೆಂಬ ಆಶಯ, ಬಹುರಾಷ್ಟ್ರೀಯ ಕಂಪೆನಿಗಳ ಮುಂದೆ ಸ್ವಾವಲಂಬಿ ದೇಶವಾಗಬೇಕೆನ್ನುವ ಕನಸುಗಳನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸುವವರು, ಗೋಡ್ಸೆಗೆ ಗುಡಿಕಟ್ಟಲು ಹೊರಟಿರುವ ಕಾಲದಲ್ಲಿ ನಾವಿದ್ದೇವೆ ಎಂದು ಯೋಚಿಸಬೇಕಾಗಿದೆ. ಮೊದಿ ಕೋಟ್ಯಾಂತರ ರೂ. ಬೆಲೆಬಾಳುವ ಸೂಟು ಧರಿಸಿದಾಗ ಕೆಲವರು ಮೈ ಮರೆಯುವುದು, ವಿಸ್ಮತಿಗೆ ಒಳಗಾದಂತೆ ಕಾಣುತ್ತದೆ. ಗಾಂಧಿಯನ್ನು ಈ ದೇಶದಲ್ಲಿ ಮತ್ತೆ ಮತ್ತೆ ಕೊಲ್ಲಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಮೈಮರೆಯಬಾರದು, ನಮ್ಮ ಜನರು ವಿಸ್ಮತಿ ಒಳಗಾಗದಂತೆ ಜಾಗೃತಿ ಮೂಡಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದೂ, ಮುಸಲ್ಮಾನ್, ಕ್ರೈಸ್ತರು ಸೇರಿ ಕಟ್ಟಿದ ಬಹು ಸಂಸ್ಕೃತಿಯ ತೊಟ್ಟಿಲಿನಂತಿರುವ ಪ್ರದೇಶ. ಈ ಪರಂಪರೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.

ಸೌಹಾರ್ದ ಪರಂಪರೆಗಾಗಿ ಕೋಮು ವಾದಿಗಳೊಂದಿಗೆ ಸೈದ್ಧಾಂತಿಕ ರಾಜಿ ಬೇಡ:- ಜಿಲ್ಲೆಯ ಸೌಹಾರ್ದ ಪರಂಪರೆ ಗಟ್ಟಿಯಾಗಬೇಕಾದರೆ ಕೋಮುವಾದಿ ಗಳೊಂದಿಗೆ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳಬಾರದು. ಬ್ಯಾಂಕ್‌ಗಳು ರಾಷ್ಟ್ರೀಕರಣ ಮಾಡಿದ ಇಂದಿರಾ ಗಾಂಧಿ, ಬಡವರ ಮನೆಯ ಬಳಿಗೆ ಬ್ಯಾಂಕ್‌ಗಳು ಬರುವಂತೆ ಮಾಡಿದರು. ಇದೇ ಸಂರ್ಭದಲ್ಲಿ ಜನಾರ್ದನ ಪೂಜಾರಿ ಅವರು ಸಾಲ ಮೇಳದ ಮೂಲಕ ಬಡ ಜನರಿಗೆ ಬ್ಯಾಂಕ್‌ಗಳ ಮೂಲಕ ನೆರವಾದರು. ಆದರೆ ಇತ್ತೀಚೆಗೆ 'ಮಾನಿಟೈಸೇಶನ್' ನೋಟುಗಳ ಅಪಮೌಲ್ಯ ಆದಾಗ ಬ್ಯಾಂಕ್‌ಗಳು, ಜಿಎಸ್‌ಟಿ ಜಾರಿಯಾದಾಗ ಅದೇ ಪೂಜಾರಿ ತುಟಿಪಿಟಿಕ್ಕೆನ್ನಲಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಪೂಜಾರಿ ಜೊತೆ ಸೇರಿಸಿಕೊಳ್ಳುತ್ತಾರೆ. ಮಹಾ ಮಾನವತಾ ವಾದಿ ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ ಗೋಕರ್ಣನಾಥ ದೇವಾಲಯಕ್ಕೆ ಕಲ್ಲಡ್ಕ ಪ್ರಭಾಕರ ಭಟ್ಟರಂತವರು ಕಾಲಿಡುವುದು ಅಪಮಾನ ಮಾಡಿದಂತೆ. ಸ್ವಾರ್ಥಕ್ಕಾಗಿ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ ಸೌಹಾರ್ದತೆಯ ಪರಂಪರೆ ಉಳಿಯಲು ಸಾಧ್ಯವಿಲ್ಲ. ಸಂಘ ಪರಿವಾರದ ಕಾಲಾಳುಗಳಾಗಿ ಪ್ರಾಣ ಕಳೆದುಕೊಳ್ಳುವ ಯುವಕರಿಗೆ ಹಿರಿಯರು, ನಾಯಕರಾಗಿರುವವರು ಬುದ್ಧಿ ಹೇಳಬೇಕಾಗಿದೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದು ಅಮೀನ್ ಮಟ್ಟು ತಿಳಿಸಿದ್ದಾರೆ.

ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಹಳತಾಗುತ್ತಿರುವಂತೆ. ಭಯದ ವಾತಾವರಣವನ್ನು ಸೃಷ್ಟಿಸುವ ಹೊಸ ತಂತ್ರಗಾರಿಕೆ ನಡೆಯುತ್ತಿದೆ. ಇದರ ಭಾಗವಾಗಿ ಗೌರಿ ಹತ್ಯೆ ನಡೆದಿದೆ. ಅದನ್ನು ಸಾಕಷ್ಟು ಮಂದಿ ಸಂಭ್ರಮಿಸಿದವರೂ ಇದ್ದಾರೆ. ದೇವರುಗಳನ್ನು ಚುನಾವಣಾ ಪೋಸ್ಟರ್‌ಗಳಲ್ಲಿ ಬಳಸುವವರನ್ನು ದೂರಮಾಡಬೇಕಾಗಿದೆ. ಮನೆಯಿಲ್ಲದವರಿಗೆ ಮನೆ, ಬಡವರಿಗೆ ಅನ್ನ, ಮಕ್ಕಳಿಗೆ ಹಾಲು ನೀಡುವುದು ಧರ್ಮ ವಾಗಬೇಕಾಗಿದೆ. ಹಿಂದೂ ಧರ್ಮದ ಒಳಗಿರುವ ಅಸಮಾನತೆಯನ್ನು ನೀಗಿಸಲು ಸಾಧ್ಯವಾಗದವರು ಸಮಾನ ನಾಗರಿಕ ಸಂಹಿತೆ ತರುತ್ತೇವೆ ಎನ್ನುತ್ತಾರೆ. ಮುಸ್ಲಿಂ ಸಮುದಾಯ ಬಗ್ಗೆ ಸಾಚಾರ ವರದಿಯಲ್ಲಿ ತಿಳಿಸಿದಂತಹ ಸಾಕಷ್ಟು ಸಮಸ್ಯೆಗಳಿದ್ದರೂ ಆ ವರದಿಯನ್ನು ಜಾರಿಗೆ ತರುವ ಬಗ್ಗೆ ಆಸಕ್ತಿ ವಹಿಸದೆ ತಲಾಖ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸಲು ಈ ರೀತಿಯ ತಂತ್ರಗಾರಿಕೆ ನಡೆಯುತ್ತಿದೆ. ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯವಾಗಿ ಉದ್ಯೋಗ ಕ್ಷೇತ್ರದಲ್ಲಾಗಲಿ ಪ್ರಾತಿನಿಧ್ಯ ನೀಡಿಲ್ಲ. ಕೇವಲ ಜೈಲಿನಲ್ಲಿ ಅವರ ಜನಸಂಖ್ಯೆಯ ಅನುಪಾತಕ್ಕಿಂತಲೂ ಅಧಿಕ ಪ್ರಾತಿನಿಧ್ಯ ಸಿಗುವ ವಾತಾವರಣವನ್ನು ನಿರ್ಮಿಸಲಾಗಿದೆ. ಈ ವಾತಾವರಣ ಬದಲಾಗಬೇಕಾಗಿದೆ. ಜನರ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.

ವಂ. ಓನಿಲ್ ಡಿಸೋಜ ಮಾತನಾಡುತ್ತಾ, ಮಾನವ ಸರಪಳಿ ಜಿಲ್ಲೆಯ ಎಲ್ಲರನ್ನು ಮಾನವೀಯತೆಯ ನೆಲೆಯಲ್ಲಿ ಒಂದು ಗೂಡಿಸಿರುವುದು ಉತ್ತಮ ಸಂದೇಶ ಎಂದರು.

ಚಂದ್ರಕಲಾ ನಂದಾವರ ಮಾತನಾಡುತ್ತಾ, ಯುವಜನರು ತಪ್ಪು ದಾರಿಯಲ್ಲಿ ಸಾಗದಂತೆ ನಮ್ಮ ಹಿರಿಯರು ತೋರಿಸಿದ ಸಮಾನತೆ, ನೈತಿಕತೆ ಮಾನವೀಯತೆ ದಾರಿಯಲ್ಲಿ ಸಾಗೋಣ ಎಂದರು.

ಸೌಹಾರ್ದ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ರಾಜ್ಯದ 500 ಕೇಂದ್ರಗಳಲ್ಲಿ ಹಮ್ಮಿಕೊಂಡ ಮಾನವ ಸರಪಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದು ಚಳವಳಿಯಾಗಲಿ ಎಂದರು.

ಸಮಾರಂಭದಲ್ಲಿ ವಾಸುದೇವ ಬೋಳೂರು, ಸಿಪಿಐ (ಎಂ) ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್, ಮಾನಪಾ ಮೇಯರ್ ಕವಿತಾ ಸನಿಲ್, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಪಿ.ಬಿ.ಡೇಸಾ, ನಿರ್ಮಲ್ ಕುಮಾರ್, ಕಬೀರ್ ಉಳ್ಳಾಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಮೇಯರ್ ಕೆ.ಆಶ್ರಫ್, ಕೇಶವ ಧರಣಿ, ಎಂ. ದೇವದಾಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಹನೀಫ್, ಖಾಲಿದ್ ಉಜಿರೆ ಮೊದಲದವರು ಪಾಲ್ಗೊಂಡರು.

ಸೌಹಾರ್ದ ಕರ್ನಾಟಕ ಸಮಿತಿಯ ಜಿಲ್ಲಾ ಸಂಚಾಲಕರಾದ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News