ಶಾಸಕ ಸ್ಥಾನಕ್ಕೆ ಹಾಲಾಡಿ ರಾಜಿನಾಮೆ: 3-4 ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆ
ಉಡುಪಿ, ಜ.30: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಇಂದು ಸಂಜೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರ ರಾಜಿನಾಮೆ ಪತ್ರವನ್ನು ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದಾರೆ.
ತಮ್ಮ ಮಾತೃ ಪಕ್ಷವಾದ ಬಿಜೆಪಿಗೆ ಮರು ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿರುವ ನಾಲ್ಕು ಬಾರಿಯ ಶಾಸಕ ಹಾಲಾಡಿ, ತಮ್ಮ ರಾಜಿನಾಮೆ ಪತ್ರವನ್ನು ಹಿಡಿದುಕೊಂಡು ಹಾವೇರಿ ಜಿಲ್ಲೆ ರಾಣಿಬೆನ್ನೂರಿಗೆ ತೆರಳಿದ್ದು, ಅಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಖುದ್ದಾಗಿ ರಾಜಿನಾಮೆ ಪತ್ರವನ್ನು ನೀಡಿದರು.
ಸ್ಪೀಕರ್ ಕೋಳಿವಾಡ ಅವರು ಫೆ. 2ರ ಸಂಜೆಯಷ್ಟೇ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರಿಂದ, ಇಂದು ಸಂಜೆ ರಾಣಿಬೆನ್ನೂರಿನ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿಯಾಗಿ ರಾಜಿನಾಮೆ ಪತ್ರ ನೀಡಿದ್ದೇನೆ. ಸಂಜೆ 5:45ಕ್ಕೆ ಅವರು ರಾಜಿನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ ಎಂದು ಹಾಲಾಡಿ ದೂರವಾಣಿ ಮೂಲಕ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮೂರು ಬಾರಿ ಕುಂದಾಪುರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪಕ್ಷ ನಡೆಸಿಕೊಂಡ ರೀತಿಗೆ ಬೇಸೆತ್ತು ಪಕ್ಷ ತೊರೆದಿದ್ದರು. ಹೀಗಾಗಿ 2013ರಲ್ಲಿ ಪಕ್ಷೇತರರಾಗಿ ನಿಂತು, ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದರು.
ಇದೀಗ ಬಿಜೆಪಿ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳ್ಳುವ ನಿರ್ಧಾರವನ್ನು ಪ್ರಕಟಿಸಿದ ಅವರು, ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿದ್ದು, ಇನ್ನು 3-4 ದಿನಗಳಲ್ಲಿ ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿಗೆ ಮತ್ತೆ ಸೇರುವುದಾಗಿ ಹೇಳಿದರು. ಬಿಜೆಪಿ ಟಿಕೇಟಿನಲ್ಲಿ ಈ ಬಾರಿ ಮತ್ತೆ ಸ್ಪರ್ಧಿಸುವಿರಾ ಎಂದು ಪ್ರಶ್ನಿಸಿದಾಗ, ನಾನೀಗ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರುತ್ತೇನೆ. ಸ್ಪರ್ಧಿಸಬೇಕೆ, ಬೇಡವೇ ಎಂಬುದನ್ನು ಪಕ್ಷದ ನಿರ್ಧಾರಕ್ಕೆ ಬಿಡುತ್ತೇನೆ ಎಂದರು.
ಕುಂದಾಪುರದಲ್ಲಿ ಹಾಲಾಡಿ ಅವರ ಪಕ್ಷ ಸೇರ್ಪಡೆಗೆ ಮೂಲ ಬಿಜೆಪಿಗರಿಂದ ತೀವ್ರ ಪ್ರತಿರೋಧ ಎದುರಾಗಿದ್ದು, ಈಗಾಗಲೇ ಯಡಿಯೂರಪ್ಪ ಅವರ ಪರಿವರ್ತನಾ ರ್ಯಾಲಿಯ ಸಂದರ್ಭದಲ್ಲಿ ಅದು ಬಹಿರಂಗ ಪ್ರದರ್ಶನಗೊಂಡಿತ್ತು. ಅಲ್ಲದೇ ಆರೆಸ್ಸೆಸ್ ಸಹ ಹಾಲಾಡಿ ಸೇರ್ಪಡೆಗೆ ವಿರೋಧ ಸೂಚಿಸಿದೆ ಎಂದು ವರದಿಯಾಗಿದ್ದು, ಈ ಎಲ್ಲವನ್ನು ನಿವಾರಿಸಿಕೊಂಡು ಹಾಲಾಡಿ ಪಕ್ಷಕ್ಕೆ ಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆಯಲು ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ.