×
Ad

ಭಾರತ ಕೊಲೆ, ಅಕಾಲಿಕ ಮರಣಗಳ ಸೂತಕದ ನಾಡು: ಜಿ. ರಾಜಶೇಖರ್

Update: 2018-01-30 21:31 IST

ಉಡುಪಿ, ಜ. 30: ಭಾರತ ದೇಶವು ಇಂದು ಕೊಲೆಗಳ ಮತ್ತು ಅಕಾಲಿಕ ಮರಣಗಳ ಸೂತಕದ ನಾಡಾಗಿದೆ. ಇದಕ್ಕೆ ಹಿಂದುತ್ವ ಕಾರಣ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಟೀಕಿಸಿದರು.

ನಾಡಿನಲ್ಲಿ ಶಾಂತಿ, ಸಾಮರಸ್ಯ ಸದಾ ನೆಲೆಸಲಿ ಮತ್ತು ಜನತೆಯಲ್ಲಿ ಪರಸ್ಪರ ಧ್ವೇಷ ಹುಟ್ಟು ಹಾಕುವ ಹುನ್ನಾರಗಳು ನಿಲ್ಲಲಿ ಎಂಬ ಆಶಯದೊಂದಿಗೆ ಸೌಹಾರ್ದತೆಗಾಗಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಉಡುಪಿ ನಗರದ ಕೆ.ಎಂ.ರಸ್ತೆಯಿಂದ ಕೋರ್ಟ್ ರಸ್ತೆಯವರೆಗೆ ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸಲಾಯಿತು. ಬಳಿಕ ಅಜ್ಜರಕಾಡಿನಲ್ಲಿರುವ ಗಾಂಧಿ ಪ್ರತಿಮೆಯ ಎದುರು ನಡೆದ ಸಭೆಯನ್ನುದ್ದೇಶಿಸಿ  ಹಿರಿಯ ಚಿಂತಕ ಜಿ. ರಾಜಶೇಖರ್ ಮಾತನಾಡಿದರು.

ಗಾಂಧೀಜಿಯನ್ನು ಕೊಂದವರು ಇಂದು ಈ ದೇಶವನ್ನು ಆಳುತ್ತಿದ್ದಾರೆ. ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಒಂದೇ ತಾತ್ವಿಕತೆಯನ್ನು ಪ್ರತಿಪಾದಿಸುವ ಸಂಸ್ಥೆಗಳಾಗಿವೆ. ಹಿಂದೂ ಮಹಾಸಭಾ ಸೇರುವ ಮೊದಲು ಗೋಡ್ಸೆ ಆರೆಸ್ಸೆಸ್ ಕಾರ್ಯಕರ್ತನಾಗಿ ಪುಣೆಯಲ್ಲಿ ಆರೆಸ್ಸೆಸ್ ಪತ್ರಿಕೆಯೊಂದರ ಸಂಪಾದಕನಾಗಿದ್ದನು. ಈ ಸಂಗತಿಯನ್ನು ಆರೆಸ್ಸೆಸ್ ಮುಚ್ಚಿ ಹಾಕಿ ಸುಳ್ಳನ್ನು ಹೇಳುತ್ತಿದೆ ಎಂದು ಅವರು ಆರೋಪಿಸಿದರು.

ಗಾಂಧಿಯನ್ನು ಗುಂಡು ಹಾರಿಸಿ ಕೊಂದ ಗೋಡ್ಸೆಗೆ ಶಿಕ್ಷೆಯಾಯಿತು. ಆದರೆ ಗಾಂಧಿಯನ್ನು ಯಾಕೆ ಕೊಲೆ ಮಾಡಬೇಕು ಮತ್ತು ಅವರು ದೇಶಕ್ಕೆ ಯಾವ ರೀತಿ ಅಪಾಯ ಎಂದು ಪ್ರತಿಪಾದಿಸಿದ ಸಾರ್ವಕರ್‌ಗೆ ಶಿಕ್ಷೆಯಾಗುವ ಬದಲು ಅವರ ಭಾವಚಿತ್ರ ಸಂಸತ್ತಿನಲ್ಲಿ ನೇತಾಡುತ್ತಿದೆ. ಈ ಮೂಲಕ ಹಿಂದುತ್ವ ಸಿದ್ಧಾಂತದಲ್ಲಿ ಶ್ರಮ ವಿಭಜನೆ ತತ್ವವನ್ನು ಕಾಣಬಹುದಾಗಿದೆ. ಪ್ರತಿಪಾದಿಸುವವರು ಒಬ್ಬರಾದರೆ ಅದನ್ನು ಆಯುಧಗಳಿಂದ ಕಾರ್ಯಗತಗೊಳಿಸುವವರು ಇನ್ನೊಬ್ಬರು. ಇದು ನಮ್ಮ ಗ್ರಾಮದಲ್ಲಿಯೂ ಕಾಣಬಹುದಾಗಿದೆ ಎಂದರು.

ಈ ಶ್ರಮ ವಿಭಜನೆಯಿಂದ ಭಾರತದ ರಸ್ತೆಗಳಲ್ಲಿ ಹೆಣಗಳು ಬೀಳುತ್ತಿವೆ ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಯಾರಲ್ಲೂ ಅಪರಾಧಿ ಪ್ರಜ್ಞೆ ಕಾಡುವುದಿಲ್ಲ. ನೈತಿಕತೆ ಜವಾಬ್ದಾರಿ ಮತ್ತು ಉತ್ತರಧಾಹಿಯೇ ಇಲ್ಲದ ಹಿಂಸೆಯು ಹಿಂದುತ್ವದ ಹೆಗ್ಗುರುತು. ಆದುದರಿಂದ ಹಿಂದುತ್ವ ಕ್ರಿಮಿನಲ್ ಸ್ವರೂಪವನ್ನು ಪ್ರತಿಯೊಬ್ಬರು ಮನಗಾಣಬೇಕು ಎಂದು ಅವರು ತಿಳಿಸಿದರು.

ಗಾಂಧಿಜೀಯನ್ನು ಬಲಿತೆಗೆದುಕೊಂಡ ಕೃತ್ಯವು ಬಾಬರಿ ಮಸೀದಿ ಧ್ವಂಸ, ಗುಜರಾತ್ ಹಿಂಸಾಚಾರ, ಕಂದಮಾಲ್ ಹಲ್ಲೆ, ಮುಹಮ್ಮದ್ ಅಕ್ಲಕ್ ಕೊಲೆಗೂ ಕಾರಣವಾಯಿತು. ಹಾಗಾಗಿ ಗಾಂಧೀ ಕೊಲೆಗೂ ಅಕ್ಲಕ್, ಗೌರಿ, ಕಲ್ಬುರ್ಗಿ, ಪನ್ಸಾರೆ ಕೊಲೆಗೂ ಯಾವುದೇ ವ್ಯಾತ್ಯಾಸ ಇಲ್ಲ ಎಂದು ಅವರು ತಿಳಿಸಿದರು.

ಕವಯತ್ರಿ ಜ್ಯೋತಿ ಗುರುಪ್ರಸಾದ್ ಮಾತನಾಡಿ, ಕೊಲೆಗಳನ್ನು ಸಮರ್ಥನೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಆತ್ಮಶೋಧನೆ ಆಗಬೇಕು. ಮಾನ ವೀಯತೆ ಪ್ರತಿಯೊಬ್ಬರ ಅಂತಿಮ ಗುರಿ ಹಾಗೂ ಜೀವನ ಉದ್ದೇಶ ಆಗಬೇಕು ಎಂದು ಹೇಳಿದರು.

ದಸಂಸ ಮುಖಂಡ ಸುಂದರ್ ಮಾಸ್ತರ್, ಸಿಐಟಿಯುನ ವಿಶ್ವನಾಥ ರೈ, ಜಮಾಅತೆ ಇಸ್ಲಾಮೀ ಹಿಂದ್‌ನ ಇದ್ರೀಸ್ ಹೂಡೆ, ಮನೋ ವೈದ್ಯ ಡಾ.ಪಿ.ವಿ. ಭಂಡಾರಿ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು.

ಮಾನವ ಸರಪಳಿಯಲ್ಲಿ ಪ್ರೊ.ಕೆ.ಫಣಿರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಾ.ಯು.ಸಿ. ನಿರಂಜನ್, ಪ್ರೊ. ಮುರಳೀಧರ ಉಪಾಧ್ಯಾಯ, ಪ್ರೊ. ಸಿರಿಲ್ ಮಥಾಯಸ್, ಬಾಲಕೃಷ್ಣ ಶೆಟ್ಟಿ, ಯು.ಗುರುದತ್, ಸುಗಂಧಿ ಶೇಖರ್, ಮೇಟಿ ಮುದಿಯಪ್ಪ, ಸಲಾವುದ್ದೀನ್, ಕವಿರಾಜ್, ಅನ್ವರ್ ಅಲಿ ಕಾಪು, ಎಸ್.ಎಸ್. ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News