×
Ad

ಸಂವಿಧಾನ ಎಲ್ಲರಿಗೂ ಸಮಾನತೆಯಿಂದ ಗೌರವಯುತವಾದ ಬದುಕು ನಡೆಸುವ ಅವಕಾಶ ನೀಡಿದೆ: ಶಾಸಕ ವಸಂತ ಬಂಗೇರ

Update: 2018-01-30 22:17 IST

ಬೆಳ್ತಂಗಡಿ, ಜ. 30: ನಮ್ಮ ಸಂವಿಧಾನವು ಎಲ್ಲರಿಗೂ ಸಮಾನತೆಯಿಂದ ಗೌರವಯುತವಾದ ಬದುಕನ್ನು ನಡೆಸುವ ಅವಕಾಶವನ್ನು ನೀಡಿದೆ, ರಾಜ್ಯದಲ್ಲಿ ಕೆಲವು ಶಕ್ತಿಗಳು ಚುನಾವಣಾ ಲಾಭಕ್ಕಾಗಿ ಗಲಭೆಯೆಬ್ಬಿಸುವ ಪ್ರಯತ್ನದಲ್ಲಿ ನಿರತವಾಗಿದೆ ಸೌಹಾರ್ದತೆಯನ್ನು ಬಯಸುವವರೆಲ್ಲರೂ ಒಟ್ಟಾಗಿ ಇಂತಹ ಶಕ್ತಿಗಳನ್ನು ಎದುರಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು.

ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದ ಸೌಹಾರ್ದ ಕರ್ನಾಟಕಕ್ಕಾಗಿ ಮಾನವ ಸರಪಳಿಯಲ್ಲಿ  ಮಾತನಾಡಿದರು.

ಭಾರತೀಯರು ಶಾಂತಿ ಸೌಹಾರ್ದತೆಯನ್ನು ಬಯಸುವವರು ದ್ವೇಷವನ್ನು ಸಾರುವವರು ಎಂದಿಗೂ ಭಾರತೀಯರಾಗಲು ಸಾಧ್ಯವಿಲ್ಲ. ಇದೀಗ ಕೆಲವೊಂದು ಶಕ್ತಿಗಳು ನಮ್ಮ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೊರಟಿದ್ದಾರೆ ಇಂತವರ ಬಗ್ಗೆ ಎಚ್ಚರವಿರಲಿ, ಶಾಂತಿ ಸೌಹಾರ್ದತೆಯನ್ನು ಸಾರುವ ಮಾನವ ಸರಪಳಿಯಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಲ್ಲೆಡೆಯೂ ಸೌಹಾರ್ದತೆಯ ಸಂದೇಶ ಹರಡಲಿ ಎಂದರು.

ಮುಖ್ಯ ಭಾಷಣಕಾರರಾರಿ ಆಗಮಿಸಿದ್ದ ಪ್ರೊ ಆಂಟನಿ ಮಾತನಾಡಿ ಸರ್ವಜನಾಂಗದ ಶಾಂತಿಯತೋಟವಾಗಿದ್ದ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ, ನಮ್ಮದು ಬೆಂಕಿ ಹಚ್ಚುವ ಸಂಪ್ರದಾಯವಾಗಬಾರದು, ನಾವು ಒಡೆಯುವ ಬದಲು ಕಟ್ಟುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು. ನಮ್ಮ ಸಂವಿಧಾನವು ಜಗತ್ತಿಗೆ ಮಾದರಿಯಾದ ಸಂವಿಧಾನ ಅದನ್ನು ಪಾಲಿಸುವ ಕಾರ್ಯ ನಡೆಯಬೇಕಾಗಿದೆ ಗಾಂಧೀಯವರು ನೀಡಿದ ಶಾಂತಿಯ ಸಂದೇಶವನ್ನು ಜೀವನದಲ್ಲಿ ಅಳವಡಿಸುವಂತೆ ಕರೆ ನೀಡಿದರು.

ಬೆಳ್ತಂಗಡಿ ಮಸೀದಿಯ ಖತೀಬ್ ಹನೀಫ್ ದಾರಿಮಿ, ಬೆಳ್ತಂಗಡಿ ಚರ್ಚಿನ ಧರ್ಮಗುರುಗಳಾದ ಫಾ. ಬಿನೋಯಿ ಜೋಸೆಫ್ ಮಾತನಾಡಿ ಸೌಹಾರ್ದತೆಯ ಅಗತ್ಯ ತಿಳಿಸಿದರು.

ಹಿರಿಯ ಹೋರಾಟಗಾರ ಡೀಕಯ್ಯ ಪ್ರಮಾಣವಚನ ಬೋಧಿಸಿದರು. ಪ್ರಧಾನ ಸಂಚಾಲಕ ಶಿಬಿ ಧರ್ಮಸ್ಥಳ ಸ್ವಾಗತಿಸಿದರು, ಬಿ.ಕೆ ವಸಂತ ಕಾರ್ಯಕ್ರಮ ನಿರೂಪಿಸಿದರು, ನ್ಯಾಯವಾದಿ ಶಿವಕುಮಾರ್ ವಂದಿಸಿದರು. ಬೆಳ್ತಂಗಡಿ ಬಸ್‌ನಿಲ್ದಾಣದ ಒಳಗೆ ಮಾನವ ಸರಪಳಿ ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News