ಭಟ್ಕಳ: ಸೌಹಾರ್ದತೆಗಾಗಿ ಮಾನವ ಸರಪಳಿ
ಭಟ್ಕಳ, ಜ. 30: ಫ್ಯಾಸಿಸ್ಟ್ ಕೋಮುವಾದಿಯೊಬ್ಬನಿಂದ 1948ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯಾಗಿದ್ದು ಅಂದು ಹರಡಿಕೊಂಡ ಕೋಮುವಾದದ ವಿಷ ಜ್ವಾಲೆ ಇಂದು ದೇಶದ್ಯಾಂತ ಹರಡಿಕೊಂಡಿದ್ದು, ರಾಜ್ಯವನ್ನು ಮಾದರಿ ಸೌಹಾರ್ದ ರಾಜ್ಯವನ್ನಾಗಿಸಲು ಮಂಗಳವಾರ ಪಕ್ಷಾತೀತ ವಾಗಿ ಮಾನವ ಸರಪಳಿ ರಚಿಸುವುದರ ಮೂಲಕ ಗಮನ ಸೆಳೆಯಲಾಯಿತು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಸಿಐಟಿಯು, ಅಕ್ಷರದಾಸೋಹ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರೂ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಪಿ.ಐ(ಎಂ) ಮುಖಂಡ ಸುಭಾಸ್ ಕೊಪ್ಪಿಕರ್, ಪಕ್ಷಾತೀತವಾಗಿ ಮಾನವ ಬಂಧುತ್ವ ಬೆಸೆಯುವ ಈ ಮಾನವ ಸರಪಳಿಯಲ್ಲಿ ಎಲ್ಲ ಜಾತಿ ಮತ, ಧರ್ಮ, ಭಾಷೆಗಳನ್ನಾಡುವ ಜನರು ಭಾಗವಹಿಸಿದ್ದು ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.
ಮಾನವ ಸರಪಳಿಯಲ್ಲಿ ಚಿಂತಕ ಪ್ರೋ.ಆರ್.ಎಸ್.ನಾಯಕ, ಸಿಐಟಿಯು ಕಾರ್ಯದರ್ಶಿ ಗೀತಾ ನಾಯ್ಕ, ಅಂಗನವಾಡಿ ಪ್ರಮುಖಿ ಪುಷ್ಪಾವತಿ ನಾಯ್ಕ, ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ ಶಿರಾಲಿ, ಗಿರೀಜಾ ಮೋಗೇರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.