ಧಾರ್ಮಿಕ ನಂಬಿಕೆ ಹಿಂದೆ ರೈತರಿಗೆ ಪೂರಕ ಆರ್ಥಿಕ ಲೆಕ್ಕಾಚಾರ: ಪ್ರಮೋದ್
ಉಡುಪಿ, ಜ.30: ದೇವರಿಗೆ ಹಣ್ಣು, ಕಾಯಿ ಅರ್ಪಿಸುವ ಧಾರ್ಮಿಕ ನಂಬಿಕೆ ಹಿಂದೆ, ನಮ್ಮ ಹಿರಿಯರ ರೈತರಿಗೆ ಪೂರಕವಾದ ಆರ್ಥಿಕ ಲೆಕ್ಕಾಚಾರದ ವ್ಯವಸ್ಥೆ ಇದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜಿಲ್ಲಾ ತೋಟಗಾರಿಕಾ ಇಲಾಖೆ, ಬೆಂಗಳೂರಿನ ಎನ್‌ಬಿಎಐಆರ್, ಕಾಸರಗೋಡಿನ ಸಿಪಿಸಿಆರ್‌ಐ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಬ್ರಹ್ಮಗಿರಿಯ ಎಸ್‌ಕೆಡಿಆರ್‌ಡಿಪಿಯ ಪ್ರಗತಿ ಸೌಧದಲ್ಲಿ ಮಂಗಳವಾರ ಆಯೋಜಿಸಿದ ತೆಂಗು ಬೆಳೆಗೆ ತಗಲುವ ಕೀಟ, ರೋಗ ನಿಯಂತ್ರಣ (ರೈತ, ವಿಜ್ಞಾನಿ, ಅಧಿಕಾರಿ, ಮಾಧ್ಯಮ ಸಂವಾದ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಊರಿನ ದೇವರಿಗೆ 108, 1008 ತೆಂಗಿನಕಾಯಿ ಗಣಹೋಮ, ಹಣ್ಣು ಕಾಯಿ ನೀಡುವ ಹಿಂದೆ ತೆಂಗಿನಕಾಯಿಗೆ ಮಾರುಕಟ್ಟೆ ಒದಗಿಸುವ, ಅದೇ ರೀತಿ ಪೆರ್ಡೂರು ಅನಂತಪದ್ಮನಾಭನಿಗೆ ಬಾಳೆಹಣ್ಣು ಸೇವೆಯ ಹಿಂದೆ ಬಾಳೆಹಣ್ಣು ಮಾರುಕಟ್ಟೆಗೆ ಉತ್ತೇಜನ ನೀಡುವ ತಂತ್ರಗಾರಿಕೆ ಇದೆ ಎಂದವರ ವಿವರಿಸಿದರು.
ಕರಾವಳಿಯ ಪ್ರತಿ ಮನೆಯಲ್ಲೂ ತೆಂಗಿನ ಮರವಿದೆ.ಪ್ರತಿಯೊಬ್ಬರೂ ತೆಂಗನ್ನು ಬೆಳೆಯುತ್ತಾರೆ. ಆದರೆ ತೆಂಗಿಗೆ ಕಳೆದ ಕಾಲು ಶತಮಾನದಿಂದ ಬೆಲೆಯೇ ಹೆಚ್ಚಾಗಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಲೆ ಏರಬೇಕೆನ್ನುವ ನಿರೀಕ್ಷೆ ರೈತನಲ್ಲಿದ್ದರೆ, ಅಂಗಡಿಯಿಂದ ನಿತ್ಯ ಸಾಮಗ್ರಿ ಕೊಂಡು ತರುವವರಿಗೆ ದರ ಏರಿಕೆಯ ಆತಂಕ ಎಂದ ಸಚಿವ ಪ್ರಮೋದ್, ರಾಜ್ಯದಲ್ಲಿ ನೀರಾ ನೂತನ ನೀತಿ ಜಾರಿಯಾಗಿದ್ದು ತೆಂಗು ಉತ್ಪಾದಕ, ನೀರಾ ಉತ್ಪನ್ನ ಸಂಸ್ಥೆಗಳಿಗೆ ಶೇ.25 ಅಥವಾ ಗರಿಷ್ಠ 50ಲಕ್ಷ ರೂ. ಸಹಾಯಧನ ಲಭ್ಯವಿದೆ ಎಂದರು.
ಕೀಟ ನಾಶಕ ರಹಿತ, ಆರೋಗ್ಯಯುತ ತೆಂಗು ಜನರಿಗೆ ಸಿಗುವಂತಾಗಬೇಕು. ತೆಂಗಿಗೆ ಬಂದ ಕೀಟ ಭಾದೆ, ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳು ಮುಂದಾಗ ಬೇಕು ಎಂದರು. ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ವತಿಯಿಂದ ತೆಂಗನ್ನು ಕಾಡುವ ಬಿಳಿ ನೊಣ ಕುರಿತ ನೂತನ ಕೃತಿಯನ್ನು ಸಚಿವ ಪ್ರಮೋದ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಕೃಷಿಯನ್ನು ಲಾಭದಾಯಕವಾಗಿಸುವ ಪ್ರಯತ್ನವಾಗ ಬೇಕು. ಕೃಷಿ, ರೈತರು ಎದುರಿಸುವ ಸಮಸ್ಯೆಗಳಿಗೆ ವಿಜ್ಞಾನಿಗಳ ಮೂಲಕ ಪರಿಹಾರ ಸಿಗಬೇಕು. ಕೃಷಿ ಭೂಮಿ ಬಂಜರು ಬೀಳುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕು. ಭತ್ತದ ಬೆಳೆ ಕುಂಠಿತವಾಗುತ್ತಿದ್ದು ಭತ್ತ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು. ಕೃಷಿ ನಿರ್ಲಕ್ಷ್ಯ ದೇದ ಪ್ರಗತಿಯ ಲಕ್ಷಣವಲ್ಲ ಎಂದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಅಂತೋನಿ ಮರಿಯಾ ಇಮಾನ್ಯುಯಲ್ ಎಂ., ಬೆಂಗಳೂರು ಎನ್‌ಬಿಎಐಆರ್ ಮುಖ್ಯ ವಿಜ್ಞಾನಿ ಡಾ. ಶೈಲೇಶ್, ಡಾ. ಕೆ. ಸೆಲ್ವರಾಜು, ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಡಾ. ರಾಜ್‌ಕುಮಾರ್ ಉಪಸ್ಥಿತರಿದ್ದರು.
ವಿಜಯ ಕರ್ನಾಟಕ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ತೋಟಗಾರಿಕಾ ಇಲಾಖಾ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಮಂಗಳೂರಿನ ಯು.ಕೆ.ಕುಮಾರನಾಥ್ ಪ್ರಾಸ್ತಾವಿಕ ಮಾತನ್ನಾಡಿದರು.ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.