ವೀಸಾ ನೀಡುವುದಾಗಿ ವಂಚನೆ: ದೂರು
Update: 2018-01-30 22:59 IST
ಉಡುಪಿ, ಜ.30: ವೀಸಾ ಕೊಡುವುದಾಗಿ ಮಹಿಳೆಯೊಬ್ಬರಿಂದ ಹಣ ಪಡೆದ ಉಡುಪಿಯ ಮಾನ್ಯತೆ ಇಲ್ಲದ ಸಂಸ್ಥೆಯು ಹಣ ಹಾಗೂ ಪಾಸ್ ಪೋರ್ಟ್ ವಾಪಾಸು ನೀಡದೆ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಉದ್ಯೋಗಾಕಾಂಕ್ಷಿಯಾಗಿದ್ದ ಶಿರ್ವ ಕುತ್ಯಾರು ರೋಡಿನ ನೀಮಾ ರಾವ್ (24) ಎಂಬವರು ಉಡುಪಿಯ ರಾಜ್ ಟವರ್ಸ್‌ನಲ್ಲಿರುವ ಒಪ್ಟಿಮಾ ಎಂಬ ಸಂಸ್ಥೆಗೆ ಡಿಪಿ10 ವೀಸಾ ಪಡೆಯಲು 2 ಲಕ್ಷ ರೂ. ಪಾವತಿಸಿದ್ದು, ತದ ನಂತರ ಸಂಸ್ಥೆಯವರು ವೀಸಾ ಮಾಡಲು ಮೂಲ ಪಾಸ್ ಪೋರ್ಟ್‌ನ್ನು ಪಡೆದು ಕೊಂಡಿದ್ದರು.
ವೀಸಾದ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನೀಮಾ ರಾವ್ ಇಂಡಿಯನ್ ಎಂಬೆಸಿಯಲ್ಲಿ ವಿಚಾರಿಸಿದಾಗ ಅವರ ಹೆಸರಿನಲ್ಲಿ ವೀಸಾ ಕೋರಿ ಯಾವುದೇ ಅರ್ಜಿಯು ಬಂದಿರುವುದಿಲ್ಲ ಹಾಗೂ ಸಂಸ್ಥೆಯು ನೋಂದಣೆಯಾಗದೆ ಇರುವ ಬಗ್ಗೆ ತಿಳಿದುಬಂತು. ಬಳಿಕ ಸಂಸ್ಥೆಯವರು ಪಡೆದ ಹಣ ಹಾಗೂ ಮೂಲ ಪಾಸ್‌ಪೋರ್ಟ್ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.