×
Ad

‘ಮಣಿಪಾಲ ಮ್ಯಾರಥಾನ್-2018’ಕ್ಕೆ 7000 ಕ್ಕೂ ಅಧಿಕ ಸ್ಪರ್ಧಿಗಳು

Update: 2018-01-31 18:17 IST

ಮಣಿಪಾಲ, ಜ.31: ‘ಮಾದಕದ್ರವ್ಯ ಮುಕ್ತ ಜೀವನ’ ಘೋಷ ವಾಕ್ಯದೊಂದಿಗೆ ಈ ಬಾರಿಯ ‘ಮಣಿಪಾಲ ಮ್ಯಾರಥಾನ್-2018’ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್, ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಸಂಸ್ಥೆ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ, ಸಿಂಡಿಕೇಟ್ ಬ್ಯಾಂಕ್ ಹಾಗೂ ಅದಾನಿ ಯುಪಿಸಿಎಲ್‌ಗಳ ಸಹಯೋಗದೊಂದಿಗೆ ಫೆ.11ರಂದು ಬೆಳಗ್ಗೆ 6:30ಕ್ಕೆ ಮಣಿಪಾಲದಲ್ಲಿ ಆಯೋಜಿಸಲಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಹೆಚ್ಚು ವ್ಯವಸ್ಥಿತವಾಗಿ ನಡೆಯುವ ಈ ಮ್ಯಾರಥಾನ್‌ನಲ್ಲಿ 7,000 ಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 3000ಕ್ಕೂ ಅಧಿಕ ಮಂದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮ್ಯಾರಥಾನ್ ಸ್ಪರ್ಧೆಯೊಂದಿಗೆ ಅದೇ ದಿನ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಉತ್ಸವದ (ಕಾರ್ನಿವಲ್) ವಾತಾವರಣವಿರಲಿದೆ. ಮಾದಕ ದ್ರವ್ಯದ ವಿರುದ್ಧ ವಿದ್ಯಾರ್ಥಿಗಳು, ಯುವಕರ ಹಾಗೂ ಸಾರ್ವಜನಿಕರಿಗೆ ಅರಿವು, ತಿಳುವಳಿಕೆ ಮೂಡಿಸುವ ಹಲವು ಕಾರ್ಯಕ್ರಮಗಳಿರುತ್ತವೆ ಎಂದರು. ಇದಕ್ಕಾಗಿ ಗ್ರೀನ್ಸ್‌ನಲ್ಲಿ ಮಳಿಗೆಗಳು, ಸ್ಲೋ ಸೈಕ್ಲಿಂಗ್, ಮಕ್ಕಳಿಗಾಗಿ ವಿವಿಧ ಆಟಗಳ ಇರುತ್ತವೆ ಎಂದು ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ತಿಳಿಸಿದರು.

ಮಾಹೆಯ ಬೆಳ್ಳಿಹಬ್ಬ ಹಾಗೂ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಪ್ಲಾಟಿನಂ ಜ್ಯುಬಿಲಿ ಆಚರಣೆಯ ಅಂಗವಾಗಿ ಈ ಮ್ಯಾರಥಾನ್‌ ಅನ್ನು ‘ಸಿಲ್ವರ್ ಮ್ಯಾರಥಾನ್’ ಆಗಿ ಆಯೋಜಿಸಲಾಗುತ್ತಿದೆ. ಒಟ್ಟು 7.8 ಲಕ್ಷ ರೂ.ಗಳ ನಗದು ಬಹುಮಾನವನ್ನು ವಿವಿಧ ವಿಭಾಗಗಳ ವಿಜೇತರಿಗೆ ವಿತರಿಸಲಾಗುತ್ತಿದೆ ಎಂದು ಮಾಹೆಯ ಕುಲಪತಿ ಡಾ.ವಿನೋದ್ ಭಟ್ ತಿಳಿಸಿದರು.

ಪುರುಷರು ಮತ್ತು ಮಹಿಳೆಯರಿಗೆ 21.1 ಕಿ.ಮೀಗಳ ಸ್ಪರ್ಧೆ ಇದ್ದು, ಇದರಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬರಿಗೂ ಸಮಯದ ಚಿಪ್‌ನ್ನು ಅಳವಡಿಸಲಾಗುವುದು. ಇದರಿಂದ ಸ್ಪರ್ಧಿಯು ಸ್ಪರ್ಧೆ ಮುಗಿಸಲು ತೆಗೆದುಕೊಂಡ ಸಮಯ ದಾಖಲಾಗುವುದು. ಇದರೊಂದಿಗೆ ಪುರುಷರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳಿಗೆ 10ಕಿ.ಮೀ. ಓಟ, ಕಾರ್ಪೋರೇಟ್ ಸಂಸ್ಥೆ ಸೇರಿದಂತೆ ಪುರುಷರು ಮತ್ತು ಮಹಿಳೆಯರಿಗೆ 5 ಕಿ.ಮೀ., ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ 5 ಮತ್ತು 3 ಕಿ.ಮೀ. ಓಟವನ್ನು ನಡೆಸಲಾಗುವುದು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ 75ನೆ ವರ್ಷ ಆಚರಣೆಯ ಸಂಬಂಧ ಅಕಾಡಮಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಐದು ಕಿ.ಮೀ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ 3 ಕಿ.ಮೀ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 3 ಕಿ.ಮೀ. ಸ್ಪರ್ಧೆ ನಡೆಯಲಿದೆ. ಕಾರ್ಪೋರೇಟ್ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ ಎಂದು ಡಾ.ವಿನೋದ್ ನಾಯಕ್ ತಿಳಿಸಿದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪ್ರವೇಶ ಪತ್ರ ಸಲ್ಲಿಸಲು ಫೆ. 2 ಕೊನೆಯ ದಿನವಾಗಿದೆ. ಹೆಸರುಗಳನ್ನು ಆನ್‌ಲೈನ್ -www.manipal.marathon.com- ಇಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 9449481776, 9986821071, 9845774289- ಸಂಪರ್ಕಿಸುವಂತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಡಾ.ಪೂರ್ಣಿಮಾ ಬಾಳಿಗಾ, ಡಾ. ಅನಿತಾಗುರು, ಯುಡಿಎಎಎ ಅಧ್ಯಕ್ಷ ಅಶೋಕ್ ಅಡ್ಯಂತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News