×
Ad

ಫೆ. 4: ಪುತ್ತೂರಿನಲ್ಲಿ ಸಾಹಿತ್ಯ ಸಂಭ್ರಮ

Update: 2018-01-31 19:28 IST

ಪುತ್ತೂರು, ಜ. 31: ಪುತ್ತೂರು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಫೆ. 4ರಂದು ‘ಸಾಹಿತ್ಯ ಸಂಭ್ರಮ’ ಜಿಲ್ಲಾ ಮಟ್ಟದ ಕವಿಗೋಷ್ಠಿ, ಸ್ವರಸಂಗಮ, ಭಾವಗಾಯನ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ ,ಯಕ್ಷರ ನಾಟ್ಯ ಕಾರ್ಯಕ್ರಮಗಳೊಂದಿಗೆ ಪುತ್ತೂರಿನ ಪುರಭವನದಲ್ಲಿ ನಡೆಯುವುದು ಎಂದು ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.4ರಂದು ಬೆಳಗ್ಗೆ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನ. ಚಂಬಲ್ತಿಮಾರ್ , ಕಾಸರಗೋಡು ಅಸ್ತಿತ್ವಂ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಎಸ್.ಎಂ. ಉಡುಪ, ಶ್ರೀದೇವಿ ನಾಗರಾಜ ಭಟ್ ಹಾಗು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹರಿಣಿ ಪುತ್ತೂರಾಯ ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ಮಟ್ಟದ ತುಳು-ಕನ್ನಡ ಕವಿಗೋಷ್ಠಿ ನಡೆಯಲಿದೆ. ಗಾನಸಿರಿ ಕಿರಣ್ ಕುಮಾರ್ ಮತ್ತು ಬಳಗದವರಿಂದ ಸ್ವರಸಂಗಮ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಾವಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 3.30ಕ್ಕೆ ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಸಭಾಪರ್ವ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ, ಬಳ್ಳಾರಿ ಅಣ್ಣ ಫೌಂಡೇಶನ್ ಅಧ್ಯಕ್ಷ ರಾಜಶೇಖರ ಮುಲಾಲಿ, ಚಿತ್ರನಟಿ ರೂಪಶ್ರೀ, ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-4ರ ವಿಜೇತರಾದ ಪ್ರಥಮ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಕಟ್ಟತ್ತಿಲ ಅವರು ಬರೆದ ಧಾರ್ಮಿಕ ಕೃತಿಗಳಾದ ಋಷ್ಯಶೃಂಗ, ಸಾಹಿತ್ಯ ಭಾರತಿ ಮತ್ತು ಧರ್ಮಜ್ಯೋತಿ, ಶಾಂತಾ ಕುಂಟಿನಿ ಅವರ ಸೂಕ್ಷ್ಮದೃಷ್ಠಿ, ಡಾ.ಸಿ.ಕೃಷ್ಣ ಶಾಸ್ತ್ರಿ ಅವರ ‘ನೂರೆಂಟು ಚುಟುಕು-ಒಳಗುಟ್ಟು ಕುಟುಕು’, ಮತ್ತು ಡಾ.ಎಸ್.ಎನ್ ಭಟ್ ಅವರ ‘ಅರ್ತಿದ ಪುರ್ಪ’ ಕೃತಿಗಳ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸೀತಾರಾಮ ಭಟ್ ಸೇರಾಜೆ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ , ಕುಂಟಾರು ರವೀಶ ತಂತ್ರಿ ಅವರಿಗೆ ಸೇವಾ ರತ್ನ ಪ್ರಶಸ್ತಿ ಹಾಗೂ ದಿಶಾ ಶೆಟ್ಟಿ ಕಟ್ಲ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಯಕ್ಷ-ಗಾನ-ನಾಟ್ಯ-ವೈಭವ- ಯಕ್ಷರ ನಾಟ್ಯ ಕಾರ್ಯ ಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಕಿಶೋರ್‌ಕುಮಾರ್ ಪುತ್ತೂರು, ಸಂಚಾಲಕ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ, ಕಾರ್ಯದರ್ಶಿ ಶಾಂತಾ ಕುಂಟಿನಿ ಹಾಗೂ ಸದಸ್ಯ ಡಾ. ಸಿ.ಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News