ಸುಜ್ಲಾನ್ ಕಾಲನಿಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ: ಮೂಲಸೌಕರ್ಯ ಅಭಿವೃದ್ಧಿಗೆ ಸಮಿತಿ ರಚನೆ
ಪಡುಬಿದ್ರೆ, ಜ. 31: ಸುಜ್ಲಾನ್ ಪುನರ್ವಸತಿ ಯೋಜನಾ ಪ್ರದೇಶದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿರ್ವಸಿತರಾಗಿರುವ ಫಲಾನುಭವಿಗಳಿಗೆ ನಿವೇಶನ ನೀಡುವ ಬಗ್ಗೆ ಪಿಡಿಒ ನೇತೃತ್ವದ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಬುಧವಾರ ಸುಜ್ಲಾನ್ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಪಡುಬಿದ್ರೆಯ ನಡ್ಸಾಲು ಪ್ರದೇಶಲ್ಲಿ ಎಂಟು ವರ್ಷಗಳ ಹಿಂದೆ ಆರಂಭವಾದ ಗಾಳಿಯಂತ್ರಗಳ ವಿದ್ಯುತ್ ಉತ್ಪಾದನೆಯ ಬಿಡಿಭಾಗಗಳ ತಯಾರಿಕಾ ಘಟಕ ಸುಜ್ಲಾನ್‌ಯಿಂದ ಸಂತ್ರಸ್ಥರಾದವರಿಗೆ ನಿರ್ಮಾಣಗೊಂಡ ಆರ್‌ಆರ್ ಕಾಲನಿಯಲ್ಲಿ ಸೂಕ್ತ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನಿವಾಸಿಗಳು ದೂರು ನೀಡಿದ್ದರು.
ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಯೋಜನಾ ನಿರ್ವಸತಿಗರಿಗೆ ಪಡುಬಿದ್ರೆಯಲ್ಲಿ ನಿರ್ಮಿಸಿದ ಕಾಲನಿಯನ್ನು ಹಿಂದೆ ಕಾಮಗಾರಿ ವಹಿಸಿದ ಗುತ್ತಿಗೆದಾರರೇ ಸಮಗ್ರವಾಗಿ ಅಭಿವೃದ್ಧಿಪಡಿಸಿ ಗ್ರಾಪಂಗೆ ಹಸ್ತಾಂತರಿಸಬೇಕು ಎಂದು ತಾಕೀತು ಮಾಡಿದರು.
ಕಾಲನಿ ಸಮಗ್ರವಾಗಿ ಅಭಿವೃದ್ಧಿ ಪಡಿಸದೇ ಇರುವುದರಿಂದ ಅಲ್ಲಿನ ಸಮಸ್ಯೆಗಳನ್ನು ಗ್ರಾಪಂ ಪರಿಹರಿಸಲು ಸಾಧ್ಯವಿಲ್ಲ. ಒಳಚರಂಡಿ, ರಸ್ತೆ ದುರಸ್ತಿ ಸಹಿತ ಯೋಜನೆಯಿಂದ ಇಲ್ಲಿ ಯೋಜನೆಗಾಗಿ ಭೂಮಿ ಕಳಕೊಳ್ಳದ ಮಂದಿಯೂ ನಿವೇಶನ ಪಡೆದು ಜಮೀನು ಮಾರಾಟ ಮಾಡಿದ್ದಾರೆ. ಅಲ್ಲದೆ ಜಮೀನು ಕಳೆದುಕೊಂಡವರಿಗೆ ಯಾವುದೇ ಉದ್ಯೋಗ ನೀಡಿಲ್ಲ. ಎಂಟು ವರ್ಷದಿಂದ ಇಲ್ಲೆ ವಾಸವಾಗಿದ್ದರೂ ಸಮಗ್ರ ಮೂಲ ಸೌಕರ್ಯವನ್ನು ಒದಗಿಸಲಾಗಿಲ್ಲ ಎಂದು ಕಾಲನಿ ನಿವಾಸಿಗಳು ದೂರಿದರು.
ಕೊರಗರಿಗೆ ಸೂಕ್ತ ನಿವೇಶನ: ನಿರ್ವಸಿತರಾಗಿ ಪಡುಬಿದ್ರೆ ಕೆರೆಕಾಡು ಬಳಿ ವಾಸಿಸುತ್ತಿರುವ 20 ಕೊರಗ ಕುಟುಂಬಳಿಗೆ ಸೂಕ್ತ ನಿವೇಶನವನ್ನು ಗುರುತಿಸಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಕೊರಗ ಕಾಲನಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ತಿಳಿಸಿದರು.
5 ವರ್ಷಗಳ ಹಿಂದೆ ಇಲ್ಲಿಗೆ ಬಂದು ಶೆಡ್‌ಗಳನ್ನು ನಿರ್ಮಿಸಿ ಜೀವನ ಸಾಗಿಸುತ್ತಿರುವ 20 ಕೊರಗ ಕುಟುಂಬಗಳಿಗೆ ಸುಜ್ಲಾನ್ ಪುನರ್ವಸತಿ ಕಾಲನಿ ಬಳಿ 50 ಸೆಂಟ್ಸ್ ಜಮೀನು ಗುರುತಿಸಿ ವಿಂಗಡಿಸಿ ನೀಡಲಾಗಿತ್ತು. ಆದರೆ ಅಲ್ಲಿ ವಸತಿ ನಿರ್ಮಾಣ ಮಾಡದಂತೆ ಪುನರ್ವಸತಿ ಕಾಲನಿ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ನವೆಂಬರ್ 2016 ರಲ್ಲಿ ಕೊರಗರಿಗೆ ನ್ಯಾಯ ದೊರಕಿತ್ತು.
ಆದರೆ ಅಲ್ಲಿ ನಿವೇಶನ ಲಭ್ಯವಾದರೂ ಸುಜ್ಲಾನ್ ಪುನರ್ವಸತಿ ಕಾಲನಿ ಕೆಲ ನಿವಾಸಿಗರ ದೌರ್ಜನ್ಯದಿಂದ ಮನೆ ನಿರ್ಮಾಣ ಮಾಡುವುದು ಕಷ್ಟವಾಗಿದೆ. ನಾವು ಒಂದು ವೇಳೆ ಮನೆ ನಿರ್ಮಿಸಿ ಕುಳಿತರೂ ಅವರು ಸಮಸ್ಯೆ ಮಾಡದೆ ಇರುತ್ತಾರೆ ಎಂಬ ನಂಬಿಕೆ ನಮಗಿಲ್ಲ. ಮುಂದಿನ ಮಳೆಗಾಲದ ಒಳಗೆ ನಮಗೆ ಬೇರೆ ಎಲ್ಲಿಯಾದರೂ ನಿವೇಶನ ನೀಡಿ ಎಂದು ಕೊರಗ ಕಾಲನಿಯ ಶ್ರೀಮತಿ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದರು.
ಪಡುಬಿದ್ರೆ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ ಅಮೀನ್, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ, ತಾಪಂ ಸದಸ್ಯೆ ನೀತಾ ಗುರುರಾಜ್, ಪುನರ್ವಸತಿ ಕೇಂದ್ರದ ಉಮನಾಥ, ಮೋಹನಾಂಗ ಸ್ವಾಮಿ ಉಪಸ್ಥಿತರಿದ್ದರು.