ನಿಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಹಾಕಿಕೊಳ್ಳಿ: ಲಕ್ಷ್ಮಣ್ ನಿಂಬರಗಿ
ಉಡುಪಿ, ಜ.31: ನಿಮ್ಮ ಪ್ರಾಣ ರಕ್ಷಣೆಗಾಗಿ ಗುಣಮಟ್ಟದ ಹೆಲ್ಮೆಟ್ ಹಾಕಿ, ಸಿಕ್ಕಿಬಿದ್ದರೆ ಪೊಲೀಸರು ವಿಧಿಸುವ ದಂಡಕ್ಕೆ ಹೆದರಿ ಹೆಲ್ಮೆಟ್ ಹಾಕಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಾರಿ ಲಕ್ಷ್ಮಣ ಬ. ನಿಂಬರಗಿ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ವಕೀಲರ ಸಂಘ ಉಡುಪಿ, ಮಣಿಪಾಲ ಅಟೋ ಕ್ಲಬ್, ಉಡುಪಿ ಮಾನವ ಹಕ್ಕುಗಳು ಮತ್ತು ಅಹವಾಲುಗಳು ಹಾಗೂ ಲೀಗಲ್ ಇನ್ಛೋ ಪೇಜಸ್‌ಗಳ ಸಂಯುಕ್ತ ಆಶ್ರಯದಲ್ಲಿ ಗುಣಮಟ್ಟದ ಹೆಲ್ಮೆಟ್ ಜಾಗೃತಿಗೆ ಸಂಬಂಧಿಸಿ ಬುಧವಾರ ಜಿಲ್ಲಾ ನ್ಯಾಯಾಲಯದ ಆವರಣದಿಂದ ನಡೆದ ಬೈಕ್ ಜಾಥಾದಲ್ಲಿ ಅವರು ಮಾತನಾಡುತಿದ್ದರು.
ಹೆಚ್ಚುತ್ತಿರುವ ರಸ್ತೆ ಅಪಘಾತದಲ್ಲಿ ಬಹುತೇಕ ಮಂದಿ ತಲೆಗಾಗುವ ಗಂಭೀರ ಗಾಯದಿಂದ ಸಾವನ್ನಪ್ಪುತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಹೆಲ್ಮೆಟ್ ಕಡ್ಡಾಯ ಗೊಳಿಸಿದೆ. ಆದರೆ ಜನ ಪೊಲೀಸರು ಹಾಕುವ ದಂಡಕ್ಕೆ ಹೆದರಿ ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಂಡಿದ್ದೇವೆ. ನಮಗಾಗಿ ಹೆಲ್ಮೆಟ್ ಹಾಕಬೇಡಿ. ನಿಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ ಎಂದವರು ಸಲಹೆ ನೀಡಿದರು.
ರಸ್ತೆಯ ಇಕ್ಕೆಲಗಳಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುವುದು ಕಂಡು ಬಂದರೆ ಕಂಟ್ರೋಲ್ ರೂಮ್‌ಗೆ ಇಲ್ಲವೇ ನನಗೆ ದೂರು ನೀಡಿ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪೊಲೀಸರು, ಸಾರ್ವಜನಿಕರು, ಖಾಸಗಿ ಕಂಪನಿ ಉದ್ಯೋಗಿಗಳ ಭಾಗವಹಿಸಿದ ಬೃಹತ್ ಜಾಥಾಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕಾ ಟಿ. ಹಸಿರು ನಿಶಾನೆ ತೋರಿಸಿದರು.
ಎಎಸ್ಪಿ ಕುಮಾರ್‌ಚಂದ್ರ, ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ಎಚ್. ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ಉಪಸ್ಥಿತರಿದ್ದರು.