ಭಟ್ಕಳ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಸುವಂತೆ ನ್ಯಾಯಾಧೀಶರ ಕರೆ
ಭಟ್ಕಳ, ಜ.31: ಜನಸಾಮಾನ್ಯರ ಜೀವ ಅಮೂಲ್ಯವಾಗಿದ್ದು, ದ್ವಿಚಕ್ರ ವಾಹನ ಸವಾರರು ಅಗತ್ಯ ಹೆಲ್ಮೆಟ್ ಬಳಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ರಾಘವೇಂದ್ರ ಅವರು ಹೇಳಿದರು.
ಅವರು ಇಲ್ಲಿನ ಶಿರಾಲಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ ಭಟ್ಕಳ, ಪೊಲೀಸ್ ಇಲಾಖೆ ಇವುಗಳ ಸಹಯೋಗದೊಂದಿಗೆ ಏರ್ಪಡಿಸಲಾದ ಉತ್ತಮ ಮಟ್ಟದ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅನೇಕ ಕಾನೂನ ಅರಿವು ಶಿಬಿರಗಳ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಜನ ಸಾಮಾನ್ಯರು ಅಗತ್ಯ ಹೆಲ್ಮೆಟ್ ಬಳಸಬೇಕು ಎನ್ನುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಪ್ರಯೋಜನ ಎಲ್ಲರಿಗೂ ದೊರೆಯಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ರಾಜವರ್ಧನ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹನ್ಮಂತ ರಾವ್ ಕುಲಕರ್ಣಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಂದ್ರ, ಗ್ರಾ.ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ, ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಗಣೇಶ ಕೆ.ಎಲ್., ಗ್ರಾಮೀಣ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಂಜಪ್ಪ, ಸಹಾಯಕ ಸಬ್ ಇನ್ಸ್ಪೆಕ್ಟರ್ ನವೀನ ಬೋರಕರ್ ಉಪಸ್ಥಿತರಿದ್ದರು.
ಉಪನ್ಯಾಸವನ್ನು ನೀಡಿದ ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ ಶಿರಸ್ತ್ರಾಣ ಧರಿಸುವ ಕುರಿತು ನ್ಯಾಯಾಂಗದ ಕ್ರೀಯಾಶೀಲತೆಯಿಂದ ಉಂಟಾದ ಪರಿಣಾಮದ ತೀರ್ಪಿನ ಮೂಲಕವಾಗಿ ಐ.ಎಸ್.ಐ. ಮಾರ್ಕ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು ಮತ್ತು ಅಪಘಾತಗಳಿಂದ ಮಾನವ ಸಂಪನ್ಮೂಲದ ನಷ್ಟವಾಗುವುದರಿಂದ ಅದನ್ನು ತಡೆಯುವ ಕುರಿತು ಜಾಗೃತಿ ಮೂಡಿಸಿದರು. ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭಗಳು ಅದರಿಂದ ಉಳಿಯುವ ಜೀವಗಳು ಮತ್ತು ಅವುಗಳು ಯಾವ ರೀತಿಯ ಹೆಲ್ಮೆಟ್ ಧರಿಸಬೇಕೆಂಬ ಕುರಿತು ಅಂಕೆ ಸಂಖ್ಯೆಗಳ ಮೂಲಕ ಮಾಹಿತಿ ನೀಡಿದರು.